ಡೈಲಿವಾರ್ತೆ: 07/ಮೇ/2026

ಮಮತಾ ಸರ್ಕಾರಕ್ಕೆ ತೆರೆ: ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜನೆ, ಬಿಜೆಪಿ ಸರ್ಕಾರ ರಚನೆಗೆ ದಾರಿ ಸುಗಮ

ಕೊಲ್ಕತ್ತಾ, ಮೇ 7: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯಲ್ಲಿ ರಾಜ್ಯಪಾಲ R. N. Ravi ಅವರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸಿದ್ದಾರೆ.

ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕವೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಭಾರತದ ಸಂವಿಧಾನದ 174ನೇ ವಿಧಿಯ ಉಪವಿಧಿ (2)(ಬಿ) ಅಡಿಯಲ್ಲಿ ದೊರೆತಿರುವ ಅಧಿಕಾರವನ್ನು ಬಳಸಿಕೊಂಡು ರಾಜ್ಯಪಾಲರು ಈ ಆದೇಶ ಹೊರಡಿಸಿದ್ದಾರೆ. ಮೇ 6ರಂದು ವಿಶೇಷ ಗೆಜೆಟ್ ಅಧಿಸೂಚನೆ (ಸಂಖ್ಯೆ: 275-PA/1L-03/2026) ಪ್ರಕಟಗೊಂಡಿದ್ದು, ಮೇ 7ರಿಂದ ಜಾರಿಗೆ ಬರುವಂತೆ 17ನೇ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ ಎಂದು ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆ ತಿಳಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿ ಸ್ಪಷ್ಟ ಬಹುಮತ ಪಡೆದಿದ್ದರೂ, ಮತ ಕಳ್ಳತನ ಮತ್ತು ಸಂಚು ಮೂಲಕ ಸೋಲುಂಟಾಗಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ನಿರಾಕರಿಸಿದ್ದರು. ಈ ಬೆಳವಣಿಗೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಆತಂಕಕ್ಕೂ ಕಾರಣವಾಗಿತ್ತು. ಇದೀಗ ವಿಧಾನಸಭೆ ವಿಸರ್ಜನೆಯೊಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಅಧಿಕಾರಾವಧಿಗೂ ಅಧಿಕೃತ ಅಂತ್ಯ ಕಂಡಿದೆ. ಹೊಸ ಸರ್ಕಾರ ರಚನೆಗೆ ಮಾರ್ಗ ಸುಗಮವಾಗಿದ್ದು, ಮೇ 9ರಂದು ಬಿಜೆಪಿ ನೇತೃತ್ವದ ಮೊದಲ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈವರೆಗೆ ಬಿಜೆಪಿ ರಾಜ್ಯಪಾಲರಿಗೆ ಅಧಿಕೃತವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ.ರಾಜ್ಯಪಾಲ ಆರ್.ಎನ್. ರವಿ ಸಹಿ ಮಾಡಿದ ಈ ಆದೇಶವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ದುಶ್ಯಂತ ನರಿಯಾಲ ಪ್ರಕಟಿಸಿದ್ದು, ಹೊಸದಾಗಿ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ 18ನೇ ವಿಧಾನಸಭೆ ರಚನೆಗೆ ದಾರಿ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.