



ಡೈಲಿವಾರ್ತೆ: 07/ಮೇ/2026

ಕುಣಿಗಲ್: ಬೊಲೆರೊ-ಬೈಕ್ ನಡುವೆ ಭೀಕರ ಅಪಘಾತ; ಬಜರಂಗದಳದ ಇಬ್ಬರು ಕಾರ್ಯಕರ್ತರ ದುರ್ಮರಣ

ಕುಣಿಗಲ್: ತಾಲ್ಲೂಕಿನ ರಾಜ್ಯ ಹೆದ್ದಾರಿ 33ರ ಟಿ.ಎಂ. ರಸ್ತೆಯ ಕೊತ್ತಗೆರೆ ಗ್ರಾಮದ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರು ಕುಣಿಗಲ್ ಪಟ್ಟಣದ ಬಜರಂಗದಳದ ಸಕ್ರಿಯ ಕಾರ್ಯಕರ್ತರು ಎಂದು ಗುರುತಿಸಲಾಗಿದೆ.
ಕುಣಿಗಲ್ ಪಟ್ಟಣದ ಆಶ್ರಯ ಕಾಲೋನಿ ನಿವಾಸಿ ಆಕಾಶ್ (28) ಹಾಗೂ ಚೌಡೇಶ್ವರಿ ಬೀದಿಯ ಮಂಜುನಾಥ್ (36) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಆಕಾಶ್ ಈ ಹಿಂದೆ ಕುಣಿಗಲ್ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದ ಅವರು, ತಮ್ಮ ಪಿ.ಎಫ್ (PF) ಹಣವನ್ನು ಪಡೆಯುವ ಸಂಬಂಧ ಅಗತ್ಯ ದಾಖಲೆಗಳೊಂದಿಗೆ ಸ್ನೇಹಿತ ಮಂಜುನಾಥ್ ಅವರೊಡನೆ ಬೈಕ್‌ನಲ್ಲಿ ತುಮಕೂರಿನ ಪಿ.ಎಫ್ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ವಿಧಿಯಾಟ ಬೇರೆಯೇ ಆಗಿತ್ತು. ನಿಯಂತ್ರಣ ತಪ್ಪಿದ ಬೊಲೆರೊತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಬೊಲೆರೊ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮೊದಲು ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ವೇಗವಾಗಿ ಬಂದು ಆಕಾಶ್ ಮತ್ತು ಮಂಜುನಾಥ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಆಕಾಶ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ತಕ್ಷಣವೇ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಕುಣಿಗಲ್ ವೃತ್ತ ನಿರೀಕ್ಷಕರಾದ ಮಾದ್ಯಾನಾಯ್ಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ರಸ್ತೆಯುದ್ದಕ್ಕೂ ರಕ್ತದ ಮಡುವಿನ ದೃಶ್ಯ ಮನಕಲಕುವಂತಿತ್ತು. ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬೊಲೆರೊ ಚಾಲಕನ ನಿರ್ಲಕ್ಷ್ಯದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.