



ಡೈಲಿವಾರ್ತೆ: 09/ಮೇ/2026

ಬ್ರಹ್ಮಾವರದಲ್ಲಿ ಮಟ್ಕಾ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: ಓರ್ವ ಬಂಧನ, ನಗದು ಹಾಗೂ ದಾಖಲೆ ವಶ

ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪದ ಮೇರೆಗೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ವಾರಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಚಂದ್ರಶೇಖರ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯ ಕಿಶೋರ್ ಎಂಬುವರನ್ನು ಎರಡನೇ ಆರೋಪಿಯಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.
ದಿನಾಂಕ 08.05.2026 ರಂದು ಬ್ರಹ್ಮಾವರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಜಯಕರ ಅವರು ಕರ್ತವ್ಯದಲ್ಲಿದ್ದ ವೇಳೆ, ವಾರಂಬಳ್ಳಿ ಗ್ರಾಮದ ಬೀಟ್ ಸಿಬ್ಬಂದಿ ರಾಘವೇಂದ್ರ ಹಾಗೂ ಚಾಂತಾರು ಗ್ರಾಮದ ಬೀಟ್ ಸಿಬ್ಬಂದಿ ಪ್ರದೀಪ ಆಲಿಪುರ ಅವರು ಸಂಜೆ ವೇಳೆ ಮಾಹಿತಿ ನೀಡಿದ್ದರು. ವಾರಂಬಳ್ಳಿ ಗ್ರಾಮದ ಬಸ್ ನಿಲ್ದಾಣದ ಸಮೀಪದ ಕೀರ್ತಿ ಲಾಡ್ಜ್ ಕಟ್ಟಡದ ಬದಿಯ ಓಣಿಯಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.ಈ ಮಾಹಿತಿಯ ಮೇರೆಗೆ ಪೊಲೀಸ್ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಮರೆಯಲ್ಲಿ ನಿಂತು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ಚಂದ್ರಶೇಖರ ಸಾರ್ವಜನಿಕರನ್ನು ಕೂಗಿ ಕರೆದು 00 ರಿಂದ 99ರೊಳಗಿನ ಸಂಖ್ಯೆಗಳ ಮೇಲೆ ಹಣ ಪಣವಾಗಿ ಹಾಕಿಸಿಕೊಂಡು, 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಹಣ ಸಂಗ್ರಹಿಸುತ್ತಿದ್ದುದನ್ನು ಪೊಲೀಸರು ಗಮನಿಸಿದ್ದಾರೆ.
ಸಂಜೆ ಸುಮಾರು 6.35 ಗಂಟೆಗೆ ದಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ಹಲವರು ಪರಾರಿಯಾಗಿದ್ದು, ಮುಖ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ತನ್ನ ಬಳಿ ಇಟ್ಟುಕೊಂಡು ಉಳಿದ ಹಣವನ್ನು ಮಲ್ಪೆಯ ಕಿಶೋರ್ ಎಂಬುವರಿಗೆ ನೀಡುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಶದಿಂದ ಮಟ್ಕಾ ಜುಗಾರಿ ಮೂಲಕ ಸಂಗ್ರಹಿಸಿದ್ದ ₹740 ನಗದು, ಮಟ್ಕಾ ಸಂಖ್ಯೆಗಳು ನಮೂದಿಸಿದ್ದ ಚೀಟಿ ಹಾಗೂ ಬಾಲ್‌ಪೆನ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ 78(I)(III) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.