ಡೈಲಿವಾರ್ತೆ: 09/ಮೇ/2026

ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಮಹಿಳೆ ಮೃತ್ಯು, ಮತ್ತೋರ್ವರಿಗೆ ಗಂಭೀರ ಗಾಯ

​ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದೇವರ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

​ಘಟನೆಯ ವಿವರ:
ಧಾರವಾಡ ಮೂಲದ ಸುಶೀಲ ಹಾಗೂ ಅವರ ಪುತ್ರಿ ಮಮತ ಅವರು ಸಂಬಂಧಿಕರಾದ ನಿಖಿತಾ ಮತ್ತು ಸುಮತಿ ಅವರೊಂದಿಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೇ 8ರಂದು ಸಂಜೆ ಸುಮಾರು 7:00 ಗಂಟೆಯ ಸುಮಾರಿಗೆ ದೇವರ ದರ್ಶನ ಮುಗಿಸಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ.

​ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದ ನಿಖಿತಾ ಅವರು ನೀಡಿದ ದೂರಿನ ಪ್ರಕಾರ, ಮಮತ ಹಾಗೂ ಸುಶೀಲ ಅವರು ಸರ್ವೀಸ್ ರಸ್ತೆ ದಾಟಿ ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್ ಬಳಿ ನಿಂತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ KA12MB6010 ಸಂಖ್ಯೆಯ ಕಾರು ಚಾಲಕ ಸುರೇಂದ್ರ ಎಂಬಾತ ರಸ್ತೆಯ ತೀರಾ ಎಡಬದಿಗೆ ನುಗ್ಗಿ ಇವರಿಬ್ಬರಿಗೂ ಬಲವಾಗಿ ಢಿಕ್ಕಿ ಹೊಡೆದಿದ್ದಾನೆ.
ಢಿಕ್ಕಿಯ ರಭಸಕ್ಕೆ ಮಮತ ಮತ್ತು ಸುಶೀಲ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಮಮತ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು, ಎಡಗಾಲಿನ ಮೂಳೆ ಮುರಿತಕ್ಕೊಳಗಾಗಿತ್ತು. ತಕ್ಷಣವೇ ಸ್ಥಳೀಯರ ನೆರವಿನಿಂದ ಆಂಬುಲೆನ್ಸ್ ಮೂಲಕ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮಮತ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸುಶೀಲ ಅವರು ತಲೆಯ ಹಿಂಭಾಗ, ಸೊಂಟ ಹಾಗೂ ಭುಜಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಸುರೇಂದ್ರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪರಾಧ ಕ್ರಮಾಂಕ: 58/2026 ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 281 (ಅಜಾಗರೂಕ ಚಾಲನೆ), 106(1) (ನಿರ್ಲಕ್ಷ್ಯದಿಂದ ಸಾವು ಸಂಭವಿಸುವುದು) ಮತ್ತು 125(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.