



ಡೈಲಿವಾರ್ತೆ: 09/ಮೇ/2026

ಸೌತೆಕಾಯಿಗೆ ಕೃತಕ ಬಣ್ಣ ಬಳಿದು ಮಾರಾಟ – ರೈಲ್ವೆ ನಿಲ್ದಾಣದಲ್ಲಿ ಬಯಲಾಯ್ತು ನಯವಂಚನೆ!

ಪಾಟ್ನಾ/ಕತಿಹಾರ್: ನೀವು ಸೇವಿಸುವ ಹಣ್ಣು ಮತ್ತು ತರಕಾರಿಗಳು ಕಣ್ಣಿಗೆ ರಾಚುವಂತೆ ಅತೀ ಹಸಿರಾಗಿ ಅಥವಾ ತಾಜಾವಾಗಿ ಕಂಡರೆ ಒಮ್ಮೆ ಎಚ್ಚರವಹಿಸಿ! ಲಾಭದ ಆಸೆಗೆ ಬಿದ್ದ ವ್ಯಾಪಾರಿಗಳು ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಘಟನೆಯೊಂದು ಬಿಹಾರದ ಕತಿಹಾರ್ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಇತ್ತೀಚೆಗೆ ಹಣ್ಣು ಮತ್ತು ತರಕಾರಿಗಳನ್ನು ತಾಜಾವಾಗಿ ಇರಿಸಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕತಿಹಾರ್ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 7 ಮತ್ತು 8ರಲ್ಲಿ ಮಹಿಳೆಯರಿಬ್ಬರು ಬಾಡಿಹೋಗಿದ್ದ ಸೌತೆಕಾಯಿಗಳಿಗೆ ಕೃತಕ ಹಸಿರು ಬಣ್ಣವನ್ನು ಬಳಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಪ್ಪೆ ಸುಲಿದ ಸೌತೆಕಾಯಿಗಳು ತಾಜಾವಾಗಿ ಕಾಣುವಂತೆ ಮಾಡಲು ಅವುಗಳನ್ನು ಹಸಿರು ಬಣ್ಣದ ದ್ರಾವಣದಲ್ಲಿ ಅದ್ದಿ ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತಿತ್ತು.
ವೈರಲ್ ಆದ ದೃಶ್ಯ – ಸಾರ್ವಜನಿಕರ ಆಕ್ರೋಶ:
ಈ ಆತಂಕಕಾರಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಸೇವಿಸುವ ಆಹಾರ ಎಷ್ಟರ ಮಟ್ಟಿಗೆ ಸುರಕ್ಷಿತ? ಎಂಬ ಗಂಭೀರ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ರೈಲು ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ನಯವಂಚನೆಯ ಜಾಲವು ಆಹಾರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಹಾಕಿದೆ.
ಎಚ್ಚೆತ್ತ ಆರ್‌ಪಿಎಫ್: 9 ಮಂದಿ ವಶಕ್ಕೆ
ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ರಕ್ಷಣಾ ಪಡೆ (RPF) ಅಧಿಕಾರಿಗಳು ನಿಲ್ದಾಣದ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆವರಣದಲ್ಲಿದ್ದ ಮಾರಾಟಗಾರರಿಂದ ಹಲವು ಬುಟ್ಟಿ ಸೌತೆಕಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಡಿಯೊದಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಒಂಬತ್ತು ಬೀದಿ ಬದಿ ವ್ಯಾಪಾರಿಗಳನ್ನು ಆರ್‌ಪಿಎಫ್ ವಿಚಾರಣೆಗೆ ಒಳಪಡಿಸಿದೆ.
ವಶಪಡಿಸಿಕೊಂಡ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಆರೋಗ್ಯಕ್ಕೆ ಮಾರಕ:
ಈ ರೀತಿ ತರಕಾರಿಗಳಿಗೆ ಬಳಸುವ ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳು ಮಾನವನ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿದ್ದು, ಅತಿಯಾದ ಬಳಕೆಯಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೊರಗಡೆ ಆಹಾರ ಸೇವಿಸುವಾಗ ಗ್ರಾಹಕರು ಹೆಚ್ಚಿನ ಜಾಗರೂಕತೆ ವಹಿಸುವುದು ಇಂದಿನ ಅಗತ್ಯವಾಗಿದೆ.