



ಡೈಲಿವಾರ್ತೆ: 09/ಮೇ/2026

ಪ್ರಾಮಾಣಿಕ ಸೇವೆಗೆ ಸಂದ ಗೌರವ: ಪೈಂಟರ್ ಹುಸೇನ್ ಅವರಿಗೆ ಜೆಸಿಐ ಶಿರೂರ್ ರೂರಲ್ ಘಟಕದಿಂದ ಸನ್ಮಾನ

ಶಿರೂರ್: ಪ್ರಾಮಾಣಿಕ ವೃತ್ತಿ ಜೀವನ ಹಾಗೂ ಸಮಾಜದಲ್ಲಿನ ಸೌಹಾರ್ದಯುತ ನಡವಳಿಕೆಯೇ ಒಬ್ಬ ವ್ಯಕ್ತಿಯ ನಿಜವಾದ ಆಸ್ತಿ ಎನ್ನುವುದಕ್ಕೆ ಶಿರೂರ್ ಗ್ರಾಮದ ನ್ಯೂ ಕಾಲೋನಿ ನಿವಾಸಿ ಹುಸೇನ್ ಅವರೇ ಸಾಕ್ಷಿ. ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ, ಕಳೆದ 24 ವರ್ಷಗಳಿಂದ ಪೈಂಟರ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಹುಸೇನ್ ಅವರ ಸೇವೆಯನ್ನು ಗುರುತಿಸಿ ಜೆಸಿಐ ಶಿರೂರ್ ರೂರಲ್ ಘಟಕ ವತಿಯಿಂದ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹುಸೇನ್ ಅವರು ಕಳೆದ ಎರಡೂವರೆ ದಶಕಗಳಿಂದ ಪೈಂಟಿಂಗ್ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದಾರೆ. ಕೇವಲ ವೃತ್ತಿಯಷ್ಟೇ ಅಲ್ಲದೆ, ಸ್ಥಳೀಯವಾಗಿ ಸರ್ವ ಧರ್ಮೀಯರೊಂದಿಗೆ ಭ್ರಾತೃತ್ವದ ಭಾವನೆಯಿಂದ ಬೆರೆಯುವ ಮತ್ತು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರ ಸರಳ ವ್ಯಕ್ತಿತ್ವವನ್ನು ಶ್ಲಾಘಿಸಿ ಈ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಶಿರೂರ್ ರೂರಲ್ ಘಟಕದ ಅಧ್ಯಕ್ಷರಾದ ವಿನೋದ್ ಮೇಸ್ತಾ ಅವರು ಮಾತನಾಡಿ, ಶ್ರಮಜೀವಿಗಳ ಪರಿಶ್ರಮದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಹುಸೇನ್ ಅವರಂತಹ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಂಘಟನೆಯ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಪೂರ್ವ ಅಧ್ಯಕ್ಷರಾದ ಗಿರೀಶ್ ಮೇಸ್ತಾ, ಪ್ರಮುಖರಾದ ಪಾಂಡುರಂಗ, ನಾಗೇಶ್, ನಾಗೇಂದ್ರ ಪ್ರಭು, ಘಟಕದ ಕಾರ್ಯದರ್ಶಿ ಪವನ್ ಪೂಜಾರಿ, ಜೆಜೆಸಿ ಅಧ್ಯಕ್ಷರಾದ ದೇವಾಂದ್ರ ಪಾಟೀಲ್ ಹಾಗೂ ಸದಸ್ಯರಾದ ನಾಗರಾಜ್ ಪ್ರಭು ಉಪಸ್ಥಿತರಿದ್ದು ಶುಭ ಹಾರೈಸಿದರು.ಸರಳವಾಗಿ ನಡೆದ ಈ ಕಾರ್ಯಕ್ರಮವು ಶ್ರಮಿಕ ವರ್ಗಕ್ಕೆ ನೀಡುವ ಗೌರವ ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಗಮನಾರ್ಹವಾಗಿತ್ತು.