ಡೈಲಿವಾರ್ತೆ: 10/ಮೇ/2026

ಉಡುಪಿ: ದಲಿತ ಮುಖಂಡನ ಮೇಲೆ ಹಲ್ಲೆ ಪ್ರಕರಣ – ಚಿಕಿತ್ಸೆ ನಿರಾಕರಿಸಿದ ವೈದ್ಯನ ಉದ್ಧಟತನ, ಸೇವೆಯಿಂದ ವಜಾಗೊಳಿಸಲು ಅಂಬೇಡ್ಕರ್ ಯುವಸೇನೆ ಆಗ್ರಹ​

ಉಡುಪಿ: ದಲಿತ ಮುಖಂಡರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಹಾಗೂ ಕರ್ತವ್ಯ ಲೋಪ ಎಸಗಿದ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಗುರುದತ್ತ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ವಜಾ ಮಾಡುವಂತೆ ಅಂಬೇಡ್ಕರ್ ಯುವಸೇನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.​

ಘಟನೆಯ ಹಿನ್ನೆಲೆ:​ ಶನಿವಾರ ರಾತ್ರಿ ಉಡುಪಿಯ ನಿಟ್ಟೂರು ಸಮೀಪದ ಕೊಡಂಕೂರು ತಿರುವಿನ ಬಳಿ ಅನಾಮಿಕರು ಬಾಲಕನೊಬ್ಬನಿಗೆ ಕಾರಿನೊಳಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಗಮನಿಸಿದ ದಲಿತ ಮುಖಂಡ ಮುರಳಿಯವರು, ಅನ್ಯಾಯವಾಗಿದ್ದರೆ ಪೊಲೀಸರಿಗೆ ದೂರು ನೀಡಿ, ಹಲ್ಲೆ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ನಾಲ್ವರು ದುಷ್ಕರ್ಮಿಗಳು ಮುರಳಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರದ ತುಂಡುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.​

ಗಂಭೀರವಾಗಿ ಗಾಯಗೊಂಡ ಮುರಳಿಯವರನ್ನು ಸ್ಥಳೀಯರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಾಗ ಅಲ್ಲಿನ ಕರ್ತವ್ಯನಿರತ ವೈದ್ಯ ಡಾ. ಗುರುದತ್ತ್ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.​ನಾನು ಕೇವಲ ಮದ್ದು ಕೊಡುತ್ತೇನೆ, ದಾಖಲಿಸಿಕೊಳ್ಳುವುದಿಲ್ಲ. ನನಗೆ ನ್ಯಾಯಾಲಯಕ್ಕೆ ಅಲೆಯುವ ಕೆಲಸವಿಲ್ಲ ಎಂದು ಹೇಳುವ ಮೂಲಕ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದ ಸಂಘಟನೆಯ ಮುಖಂಡರೊಂದಿಗೂ ವೈದ್ಯರು ಅಸಭ್ಯವಾಗಿ ವರ್ತಿಸಿದ್ದು, ಅವರು ಆ ಸಮಯದಲ್ಲಿ ಪಾನಮತ್ತರಾಗಿದ್ದಂತೆ ಕಂಡುಬರುತ್ತಿದ್ದರು ಎಂದು ದೂರಲಾಗಿದೆ.​

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಹಾಗೂ ಮುಖಂಡ ಹರೀಶ್ ಸಲ್ಯಾನ್, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ.​

ವೈದ್ಯಕೀಯ ವೃತ್ತಿಗೆ ಅಪಚಾರ ಎಸಗಿರುವ ಡಾ. ಗುರುದತ್ತ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು.​ ರೋಗಿಯ ಪ್ರಾಣ ರಕ್ಷಣೆಯ ಬದಲಿಗೆ ಉಡಾಫೆ ತೋರಿದ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಮುರಳಿಯವರ ಮೇಲೆ ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.

ಜನಸಾಮಾನ್ಯರ ಜೀವ ರಕ್ಷಿಸಬೇಕಾದ ಸರ್ಕಾರಿ ವೈದ್ಯರೇ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅಂಬೇಡ್ಕರ್ ಯುವಸೇನೆ ಎಚ್ಚರಿಸಿದೆ.