ಡೈಲಿವಾರ್ತೆ: 10/ಮೇ/2026

ಹೊನ್ನಾವರ: ಅಪ್ಸರಕೊಂಡ ಕಡಲತೀರದಲ್ಲಿ ಬೃಹತ್ ಅಲೆಗೆ ಮೀನುಗಾರಿಕೆಯ ದೋಣಿ ಮುಳುಗಿ ಮೀನುಗಾರ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಡೆಯಾದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟಿರುವ ದುರ್ಘಟನೆ ಇಂದು ಸಂಭವಿಸಿದೆ.

ಮೃತರನ್ನು ಹೊನ್ನಾವರ ಮೂಲದ ಚಂದ್ರಕಾಂತ ಖಾರ್ವಿ (38) ಎಂದು ಗುರುತಿಸಲಾಗಿದೆ. ಅವರೊಂದಿಗೆ ಮೀನುಗಾರಿಕೆಗೆ ತೆರಳಿದ್ದ ಮತ್ತೋರ್ವ ಮೀನುಗಾರ ಕೇಶವ ಖಾರ್ವಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿಯ ಪ್ರಕಾರ, ಬೆಳಗಿನ ಜಾವ ಇಬ್ಬರು ಮೀನುಗಾರರು ದೋಣಿಯಲ್ಲಿ ಸಮುದ್ರಕ್ಕಿಳಿದು ಮತ್ಸ್ಯ ಬೇಟೆಯಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಉಂಟಾದ ಸಮುದ್ರದ ಬೃಹತ್ ಅಲೆ ಬೋಟ್‌ಗೆ ಅಪ್ಪಳಿಸಿದ್ದು, ನಿಯಂತ್ರಣ ತಪ್ಪಿದ ಬೋಟ್ ಕ್ಷಣಾರ್ಧದಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ಇಬ್ಬರೂ ಮೀನುಗಾರರು ನೀರುಪಾಲಾಗಿದ್ದಾರೆ.

ಘಟನೆಯ ವೇಳೆ ಚಂದ್ರಕಾಂತ ಖಾರ್ವಿ ಅಲೆಗಳ ಅಬ್ಬರದಲ್ಲಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದರೆ, ಕೇಶವ ಖಾರ್ವಿ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರು ಹಾಗೂ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಚಂದ್ರಕಾಂತ ಖಾರ್ವಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಈ ಘಟನೆ ಸಂಬಂಧ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.