



ಡೈಲಿವಾರ್ತೆ: 10/ಮೇ/2026

ಕೋಟ ಪರಿಸರದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ: ಇಲಾಖೆಯ ವಿರುದ್ಧ ಕೋಟ ನಾಗೇಂದ್ರ ಪುತ್ರನ್ ಆಕ್ರೋಶ

ಕೋಟ: ಉಡುಪಿ ಜಿಲ್ಲೆಯ ಕೋಟ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಸ್ಕಾಂ ಅಧಿಕಾರಿಗಳ ಈ ಬೇಜವಾಬ್ದಾರಿತನದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಕುರಿತು ಅಧಿಕಾರಿಗಳು ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಪ್ರತಿಕ್ರಿಯಿಸಿರುವ ನಾಗೇಂದ್ರ ಪುತ್ರನ್ ಪವರ್ ಪ್ಲಾಂಟ್‌ನಲ್ಲಿ ತಾಂತ್ರಿಕ ಅಡಚಣೆಗಳಿದ್ದರೆ ಸಂಬಂಧಪಟ್ಟ ಮೇಲಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಅಥವಾ ಸ್ಪಷ್ಟ ಮಾಹಿತಿ ನೀಡಬೇಕು. ಪ್ರಸ್ತುತ ಸುಡುತ್ತಿರುವ ಬಿಸಿಲಿನ ತಾಪದಿಂದಾಗಿ ಜನಸಾಮಾನ್ಯರು ಈಗಾಗಲೇ ಕಂಗೆಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪದೇಪದೆ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಕಿಡಿಕಾರಿದ್ದಾರೆ.
ವಿದ್ಯುತ್ ವಿತರಣೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಗಂಭೀರ ಅನುಮಾನವನ್ನು ವ್ಯಕ್ತಪಡಿಸಿದ ಅವರು ದೊಡ್ಡ ಕೈಗಾರಿಕೆಗಳಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಾಮಾನ್ಯ ಜನರನ್ನು ಮಾತ್ರ ಕತ್ತಲೆಯಲ್ಲಿ ಇಡಲಾಗುತ್ತಿದೆ. ಇದರಲ್ಲಿ ಯಾವುದಾದರೂ ಗುಪ್ತ ಕಾರ್ಯಸೂಚಿ ಇದೆಯೇ ಅಥವಾ ವಿದ್ಯುತ್ ಕಳ್ಳತನದಂತಹ ಅಕ್ರಮಗಳು ನಡೆಯುತ್ತಿವೆಯೇ ಎಂಬ ಬಗ್ಗೆ ಇಲಾಖೆಯು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲದ ಇಂತಹ ಗಂಭೀರ ವಿದ್ಯುತ್ ಸಮಸ್ಯೆ ಕೇವಲ ಉಡುಪಿ ಜಿಲ್ಲೆಯಲ್ಲಿ ಮಾತ್ರ ಏಕೆ ಕಾಣಿಸಿಕೊಳ್ಳುತ್ತಿದೆ? ಅಧಿಕಾರಿಗಳು ಮನಬಂದಂತೆ ವಿದ್ಯುತ್ ಕಡಿತ ಮಾಡುವುದನ್ನು ನಿಲ್ಲಿಸಿ, ಕೂಡಲೇ ಸಮರ್ಪಕ ಉತ್ತರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅಗ್ರಹಿಸಿದ್ದಾರೆ.