



ಡೈಲಿವಾರ್ತೆ: 11/ಮೇ/2026

ಪ್ರೇಮವಿವಾಹದ ಸೇಡು: ಪ್ರಿಯಕರನ ಅಣ್ಣನ ಅಪಹರಣ, ಕೈಕಾಲು ಕಟ್ಟಿ ಕ್ರೂರ ಹಲ್ಲೆ!

ಬೆಂಗಳೂರು: ತಮ್ಮ ಮಾಡಿದ ತಪ್ಪಿಗೆ ಅಣ್ಣ ಶಿಕ್ಷೆ ಅನುಭವಿಸಬೇಕಾದ ಅಮಾನವೀಯ ಮತ್ತು ಕಾನೂನುಬಾಹಿರ ಘಟನೆಯೊಂದು ರಾಜಧಾನಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೀತಿ ಮಾಡಿ ಓಡಿಹೋದ ಯುವ ಜೋಡಿಯ ಮೇಲಿನ ಸಿಟ್ಟನ್ನು, ಯುವಕನ ಅಣ್ಣನ ಮೇಲೆ ತೀರಿಸಿಕೊಂಡಿರುವ ಆರೋಪಿಗಳು, ಆತನನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ: ಬ್ಯಾಡರಹಳ್ಳಿಯ ನಿವಾಸಿ ಶಿವಕುಮಾರ್ ಎಂಬ ಯುವಕ ಮತ್ತು ಅದೇ ಭಾಗದ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಸಂಬಂಧಕ್ಕೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಜೋಡಿ ಮನೆಯಿಂದ ಹೊರಬಂದು ನಾಪತ್ತೆಯಾಗಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಯುವತಿಯ ತಂದೆ ಬಸವರಾಜ್ ಮತ್ತು ಆತನ ಸಂಬಂಧಿಕರು, ಶಿವಕುಮಾರ್ ಪತ್ತೆಯಾಗದಿದ್ದಾಗ ಆತನ ಅಣ್ಣ ಕೊಟ್ರೇಶ್ ಎಂಬುವವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು.
ವೃತ್ತಿಯಲ್ಲಿ ಅರ್ಚಕರಾಗಿರುವ ಕೊಟ್ರೇಶ್ ಅವರನ್ನು ದೇವಸ್ಥಾನದ ಬಳಿಯೇ ತಡೆದ ಆರೋಪಿಗಳು ಪೊಲೀಸ್ ಠಾಣೆಗೆ ಹೋಗೋಣ ಬಾ ಎಂದು ನಂಬಿಸಿ ಕಾರಿನಲ್ಲಿ ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಕೊಟ್ರೇಶ್ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಗಾಯಾಳು ಕೊಟ್ರೇಶ್ ಜೀವಕ್ಕಾಗಿ ಅಂಗಲಾಚುತ್ತಿದ್ದರೂ ಕಿಂಚಿತ್ತೂ ದಯೆ ತೋರದೆ ಆರೋಪಿಗಳು ಕ್ರೌರ್ಯ ಮೆರೆದಿದ್ದಾರೆ. ಹಲ್ಲೆ ನಡೆಸುವ ದೃಶ್ಯವನ್ನು ಆರೋಪಿಗಳೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ನಿನ್ನ ತಮ್ಮ ಶಿವಕುಮಾರ್ ಎಲ್ಲೇ ಇದ್ದರೂ ಹುಡುಗಿಯನ್ನು ಕರೆದುಕೊಂಡು ಬಂದು ಒಪ್ಪಿಸಬೇಕು ಎಂದು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಕೊಟ್ರೇಶ್ ಕೈಯಲ್ಲೇ ಹೇಳಿಸಿ, ಆ ವೀಡಿಯೋವನ್ನು ಅವರ ಸಂಬಂಧಿಕರಿಗೆ ಕಳುಹಿಸಿ ಆತಂಕ ಸೃಷ್ಟಿಸಿದ್ದಾರೆ.
ಬೆದರಿಕೆ ವೀಡಿಯೋ ನೋಡಿ ಬೆಚ್ಚಿಬಿದ್ದ ಕೊಟ್ರೇಶ್ ಕುಟುಂಬಸ್ಥರು ತಕ್ಷಣ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸುತ್ತಿದ್ದಂತೆಯೇ, ಕಾನೂನಿನ ಭಯದಿಂದ ಆರೋಪಿಗಳು ಕೊಟ್ರೇಶ್‌ನನ್ನು ಅರ್ಧ ದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪ್ರಸ್ತುತ ಬ್ಯಾಡರಹಳ್ಳಿ ಪೊಲೀಸರು ಅಪಹರಣ ಮತ್ತು ಜೀವ ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಬಸವರಾಜ್ ಮತ್ತು ಇತರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತ ಕೊಟ್ರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.