



ಡೈಲಿವಾರ್ತೆ: 12/ಮೇ/2026

ಮಾಜಿ ಶಾಸಕ ಜೀವರಾಜ್ ವಿರುದ್ಧ ‘ಮತ ಡಕಾಯಿತಿ’ ಆರೋಪ: ತನಿಖೆಗೆ ಕಾಂಗ್ರೆಸ್ ಮುಖಂಡ ಕೋಟ ನಾಗೇಂದ್ರ ಪುತ್ರನ್ ಆಗ್ರಹ

ಉಡುಪಿ: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ಅಧಿಕಾರದ ಲಾಲಸೆಯಿಂದ ಅಕ್ರಮ ಹಾದಿ ಹಿಡಿದಿದ್ದು, ‘ಮತ ಡಕಾಯಿತಿ’ ನಡೆಸಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೀವರಾಜ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ತಕ್ಷಣವೇ ಕ್ಷೇತ್ರದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಧಿಕಾರಕ್ಕಾಗಿ ಇಷ್ಟು ಕೆಳಮಟ್ಟದ ಕೆಲಸವನ್ನು ಯಾರೂ ಮಾಡಿರಲಿಲ್ಲ. ಮತಪೆಟ್ಟಿಗೆಗೆ ಸಂಬಂಧಿಸಿದ ಅಕ್ರಮಗಳಲ್ಲಿ ಭಾಗಿಯಾಗಿರುವ ಜೀವರಾಜ್ ಅವರು, ಶಾಸಕ ಪದವಿಗಾಗಿ ಎಂತಹ ಹಂತಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಚುನಾವಣೆಯಲ್ಲಿ ಸೋತ ನಂತರ ಮುಂದಿನ ಚುನಾವಣೆಗೆ ಸಜ್ಜಾಗಬೇಕೇ ಹೊರತು ಇಂತಹ ಅಡ್ಡದಾರಿಗಳ ಮೂಲಕ ವಿಧಾನಸಭೆ ಪ್ರವೇಶಿಸಲು ಯತ್ನಿಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಪುತ್ರನ್ ಟೀಕಿಸಿದ್ದಾರೆ.
ಬಿಜೆಪಿ ಏಜೆಂಟ್‌ಗಳಿಂದಲೇ ಸತ್ಯದರ್ಶನ:
ಕ್ಷೇತ್ರದಲ್ಲಿ ಮತ ಡಕಾಯಿತಿ ನಡೆದಿರುವುದು ಸತ್ಯ ಎಂದು ಸ್ವತಃ ಬಿಜೆಪಿಯ ಏಜೆಂಟ್ ಅವರೇ ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೀವರಾಜ್ ಅವರನ್ನು ಕೂಡಲೇ ಬಂಧಿಸಬೇಕು. ಉನ್ನತ ಮಟ್ಟದ ತನಿಖಾಧಿಕಾರಿಗಳ ಮೇಲೆ ಯಾವುದೇ ರಾಜಕೀಯ ಪ್ರಭಾವ ಬೀಳದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ ಸ್ಥಳೀಯ ಲೋಕಸಭಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಸದರು ಇತ್ತೀಚೆಗೆ ಮಾಡುತ್ತಿರುವ ಕೆಲಸಗಳ ಬಗ್ಗೆ ನಮಗೆ ಗೌರವವಿದೆ. ಆದರೆ, ಜೀವರಾಜ್ ನನ್ನ ಸ್ನೇಹಿತ ಎಂಬ ಕಾರಣಕ್ಕೆ ಈ ರೀತಿಯ ‘ಡಕಾಯಿತಿ’ ಕೃತ್ಯಕ್ಕೆ ಸರಳ ಸಜ್ಜನ ಸಂಸದರು ಸಾಥ್ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸುತ್ತಿರುವ ಇಂತಹ ಪ್ರವೃತ್ತಿಗಳಿಗೆ ಅಂಕುಶ ಹಾಕಲು ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.