



ಡೈಲಿವಾರ್ತೆ: 12/ಮೇ/2026

ಬೆಂಗಳೂರಿನಲ್ಲಿ ಹೈಡ್ರೋ ಗಾಂಜಾ ಜಾಲ, ಅಂತರ ಜಿಲ್ಲಾ ಮನೆಗಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿವೆ. ಒಂದೆಡೆ ಮಾದಕ ವಸ್ತುಗಳ ಹಾವಳಿ ಮಿತಿಮೀರುತ್ತಿದ್ದರೆ, ಇನ್ನೊಂದೆಡೆ ಹಗಲು ಹೊತ್ತಿನಲ್ಲಿ ಕೆಲಸ ಮಾಡಿ ರಾತ್ರಿ ಹೊತ್ತು ಕನ್ನ ಹಾಕುವ ಖದೀಮರ ಸಂಖ್ಯೆ ವೃದ್ಧಿಸುತ್ತಿದೆ. ಸದ್ಯ ಸರಣಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೊಲೀಸರು, ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜ್ಯೂಸ್ ಅಂಗಡಿ ಮರೆಯಲ್ಲಿ ಹೈಡ್ರೋ ಗಾಂಜಾ ದಂಧೆ:
ಐವರ ಬಂಧನನಗರದಲ್ಲಿ ಹೈಡ್ರೋ ಗಾಂಜಾ ಹಾವಳಿಯನ್ನು ಹತ್ತಿಕ್ಕಲು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಲ್ಲೇಶ್ವರಂನಲ್ಲಿ ಜ್ಯೂಸ್ ಅಂಗಡಿಯ ನೆರಳಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೊಹಮ್ಮದ್ ಅಫ್ರನ್, ಸಬೀತ್ ಮತ್ತು ಶ್ರೀನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 464ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ, ಅಶೋಕನಗರ ಪೊಲೀಸರು ಕೇರಳದಿಂದ ರಸ್ತೆ ಮಾರ್ಗದ ಮೂಲಕ ನಗರಕ್ಕೆ ಡ್ರಗ್ಸ್ ಸಾಗಿಸುತ್ತಿದ್ದ ಮೊಹಮ್ಮದ್ ಹಮ್ಜಾ ಮತ್ತು ಯಾಸೀರ್ ಅಹಮದ್‌ನನ್ನು ಬಂಧಿಸಿದ್ದಾರೆ.
ಬಂಧಿತರಿಂದ 1.05 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 222ಗ್ರಾಂ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಲಾಗಿದ್ದು, ಅಂತರರಾಜ್ಯ ಮಾದಕ ಜಾಲದ ಬೆನ್ನು ಬಿದ್ದಿದ್ದಾರೆ.
ಮನೆ ಕೆಲಸದವರ ಮಾಹಿತಿಯೇ ಕಳ್ಳರಿಗೆ ಬಂಡವಾಳ:
ರಾಜಸ್ತಾನಿ ಗ್ಯಾಂಗ್ ಅರೆಸ್ಟ್ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ರಾಜಸ್ತಾನ ಮೂಲದ ಗೋಪಾಲ್ ಮತ್ತು ನಾಗೇಂದ್ರ ಸಹಾನಿ ಎಂಬುವವರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಇವರು ಮನೆ ಕೆಲಸದವರಿಂದ ಮಾಹಿತಿ ಪಡೆದು, ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 40 ಲಕ್ಷ ರೂಪಾಯಿ ಮೌಲ್ಯದ 196 ಗ್ರಾಂ ಚಿನ್ನ ಹಾಗೂ 1ಕೆಜಿಗೂ ಅಧಿಕ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮದ್ದೂರಿನಿಂದ ಬಂದು ಬೆಂಗಳೂರಲ್ಲಿ ಕಳ್ಳತನ:
ನೈಟ್ ರೈಡರ್ ಅಂದರ್ಮೋಜು-ಮಸ್ತಿಗಾಗಿ ಪ್ರತಿ ಸಂಜೆ ಮದ್ದೂರಿನಿಂದ ಬೆಂಗಳೂರಿಗೆ ಬಂದು, ರಾತ್ರಿ ವೇಳೆ ಕನ್ನ ಹಾಕಿ ಬೆಳಗಾಗುವುದರೊಳಗೆ ಊರು ಸೇರುತ್ತಿದ್ದ ಮಹೇಶ್ ಗೌಡ ಅಲಿಯಾಸ್ ಆನಂದ್ ಎಂಬ ಕುಖ್ಯಾತ ಕಳ್ಳನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಪಾಪಣ್ಣ ನೇತೃತ್ವದ ತಂಡವು ಈತನಿಂದ 312 ಗ್ರಾಂ ಚಿನ್ನ ಹಾಗೂ 2.5 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಿದೆ.
ಜಿಂಕೆ ಕೊಂಬು ಮಾರಾಟ ಜಾಲ ಪತ್ತೆ:
ನಗರದಲ್ಲಿ ವನ್ಯಜೀವಿ ಉತ್ಪನ್ನಗಳ ಅಕ್ರಮ ಮಾರಾಟವೂ ನಡೆಯುತ್ತಿದ್ದು, ತುಮಕೂರಿನಿಂದ ಜಿಂಕೆ ಕೊಂಬುಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮುರಳಿ, ಮಂಜುನಾಥ್ ಮತ್ತು ಕಾರ್ಯಪ್ಪ ಎಂಬುವವರನ್ನು ಸಿಸಿಬಿ ಹಾಗೂ ಚಿಕ್ಕಬಾಣಾವಾರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.