ಡೈಲಿವಾರ್ತೆ: 12/ಮೇ/2026

ಕಾರು ಕೊಡಿಸುವ ನೆಪದಲ್ಲಿ ₹7.5 ಲಕ್ಷ ದರೋಡೆ: ಖಾರದ ಪುಡಿ ಎರಚಿ ಹಣ ದೋಚಿದ ಗ್ಯಾಂಗ್‌ ಬಂಧನ

ಚಿಕ್ಕಬಳ್ಳಾಪುರ: ಕಾರು ಖರೀದಿಗೆ ಸಹಾಯ ಮಾಡುವುದಾಗಿ ನಂಬಿಕೆ ಮೂಡಿಸಿ ವ್ಯಕ್ತಿಯೊಬ್ಬರಿಂದ ಏಳೂವರೆ ಲಕ್ಷ ರೂಪಾಯಿ ದೋಚಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದ್ದು, ಘಟನೆ ನಡೆದ ಕೇವಲ ಎರಡು ಗಂಟೆಯಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೌರಿಬಿದನೂರಿನ ವಿನಾಯಕ ನಗರದ ನಿವಾಸಿ ಶಿವಶಂಕರ ಅರಾಧ್ಯ ಹೋಟೆಲ್ ಹಾಗೂ ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದರು. ವಾಕಿಂಗ್‌ಗೆ ತೆರಳುತ್ತಿದ್ದ ವೇಳೆ ದೂರದ ಸಂಬಂಧಿ ಯಶ್ವಂತ್ ಅರಾಧ್ಯ ಪರಿಚಯವಾಗಿದ್ದು, ತನ್ನ ಬಳಿ ಯೆಲ್ಲೋ ಬೋರ್ಡ್ ಕಾರುಗಳ ವ್ಯವಹಾರವಿದೆ ಎಂದು ಹೇಳಿ, ಕಡಿಮೆ ಬೆಲೆಗೆ ಕಾರು ಕೊಡಿಸುವುದಾಗಿ ಹಾಗೂ ಟ್ರಾವೆಲ್ಸ್‌ಗೆ ಬಿಟ್ಟು ತಿಂಗಳಿಗೆ ಹೆಚ್ಚಿನ ಆದಾಯ ಬರಿಸುವುದಾಗಿ ನಂಬಿಕೆ ಮೂಡಿಸಿದ್ದಾನೆ. ಯಶ್ವಂತ್‌ನ ಮಾತು ನಂಬಿದ ಶಿವಶಂಕರ ಅರಾಧ್ಯ ಮನೆಯಲ್ಲಿದ್ದ ಹಣ ಹಾಗೂ ಒಡವೆಗಳನ್ನು ಅಡಮಾನ ಇಟ್ಟು ಒಟ್ಟು ಏಳೂವರೆ ಲಕ್ಷ ರೂಪಾಯಿ ಸಂಗ್ರಹಿಸಿದ್ದರು. ಎರಡು ಬ್ಯಾಗ್‌ಗಳಲ್ಲಿ ಹಣ ಇಟ್ಟುಕೊಂಡು ಮನೆಯಿಂದ ಹೊರಬಂದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಿಳಾಸ ಕೇಳುವ ನೆಪದಲ್ಲಿ ಸಮೀಪಿಸಿ, ಏಕಾಏಕಿ ಕಣ್ಣಿಗೆ ಖಾರದ ಪುಡಿ ಎರಚಿ ಹಣ ಇದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದರು.

ಘಟನೆಯ ವೇಳೆ ಶಿವಶಂಕರ ಅರಾಧ್ಯ “ಕಳ್ಳ… ಕಳ್ಳ…” ಎಂದು ಕೂಗಿಕೊಂಡಿದ್ದು, ಆರೋಪಿಗಳೊಂದಿಗೆ ತಳ್ಳಾಟ-ನೂಕಾಟವೂ ನಡೆದಿದೆ. ಸಾರ್ವಜನಿಕರು ಅಡ್ಡ ಬಂದಾಗ ಆರೋಪಿಗಳು ಲಾಂಗ್‌ ತೋರಿಸಿ ಬೆದರಿಕೆ ಹಾಕಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಘಟನೆಯ ಸಂದರ್ಭದಲ್ಲೇ ಸ್ಥಳದಲ್ಲಿದ್ದ ಯಶ್ವಂತ್ ಯಾವುದೇ ರೀತಿಯ ಪ್ರತಿರೋಧ ತೋರಿಸದೇ ಇರುವುದು ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು. ವಿಚಾರಣೆ ನಡೆಸಿದಾಗ ಯಶ್ವಂತ್‌ನೇ ಈ ದರೋಡೆ ಸಂಚಿನ ಮಾಸ್ಟರ್‌ಮೈಂಡ್‌ ಎಂಬುದು ಬೆಳಕಿಗೆ ಬಂದಿದೆ. ಠಾಣೆಗೆ ಇಬ್ಬರು ಯುವಕರನ್ನು ಕರೆಸಿ ಹಣ ದೋಚುವ ಸಂಚು ರೂಪಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಬೆಂಗಳೂರಿನ ಹೆಬ್ಬಾಳದಿಂದ ಕೆಆರ್‌ ಪುರಂ ರಸ್ತೆಯ ಭಾಗದಲ್ಲಿ ಇಬ್ಬರು ಆರೋಪಿಗಳನ್ನು ನಗದು ಸಮೇತ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.