



ಡೈಲಿವಾರ್ತೆ: 12/ಮೇ/2026

ಮಲಪ್ಪುರಂ ವ್ಯೂ ಪಾಯಿಂಟ್‌ನಲ್ಲಿ ಸಿಡಿಲಿನ ಅಬ್ಬರ: ನಾಲ್ವರು ವಿದ್ಯಾರ್ಥಿಗಳ ದಾರುಣ ಸಾವು, ಮೂವರು ಗಂಭೀರ

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡ ಪ್ರದೇಶದಲ್ಲಿ ಭೀಕರ ಗುಡುಗು–ಸಿಡಿಲಿನ ಅಬ್ಬರ ನಾಲ್ವರು ಯುವ ವಿದ್ಯಾರ್ಥಿಗಳ ಜೀವ ಬಲಿ ಪಡೆದಿರುವ ದುರ್ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಕಡದ ವೆಳ್ಳಿಲ ಕಡುಕಾ ಸಿಟಿ ನಂಬೂರಿಕಾಡ್ ವ್ಯೂ ಪಾಯಿಂಟ್‌ಗೆ ಭೇಟಿ ನೀಡಿದ್ದ ಏಳು ಮಂದಿಯ ವಿದ್ಯಾರ್ಥಿಗಳ ತಂಡದ ಮೇಲೆ ಸಂಜೆ ಸುಮಾರು 5:30ರ ವೇಳೆಗೆ ಆಕಸ್ಮಿಕವಾಗಿ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ರಹೀಸ್ (20), ಬಹಾಸ್ (18), ಸಿಯಾದ್ (18) ಹಾಗೂ ಫಹದ್ (22) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ರೋಶನ್ (20), ಇಶಾತ್ (19) ಮತ್ತು ಸಲ್ಮಾನುಲ್ ಫಾರಿಸ್ (21) ಅವರನ್ನು ತಕ್ಷಣ ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ನಡೆದ ಪ್ರದೇಶ ದಟ್ಟ ಕಾಡಿನ ಮಧ್ಯೆ ಇರುವ ದುರ್ಗಮ ವ್ಯೂ ಪಾಯಿಂಟ್ ಆಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು. ಇದೇ ವೇಳೆ ಭಾರೀ ಮಳೆಯೊಂದಿಗೆ ಗುಡುಗು–ಸಿಡಿಲಿನ ಆರ್ಭಟ ಹೆಚ್ಚಾಗಿದ್ದರಿಂದ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸಂಕಷ್ಟ ಎದುರಿಸಿದರು.
ಅನಿರೀಕ್ಷಿತ ಪ್ರಕೃತಿ ವಿಕೋಪ ನಾಲ್ವರು ಯುವಕರ ಜೀವ ಕಸಿದುಕೊಂಡಿರುವ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ಆಘಾತ ಮೂಡಿಸಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.