



ಡೈಲಿವಾರ್ತೆ: 13/ಮೇ/2026

ಸ್ಯಾಂಡಲ್‌ವುಡ್‌ಗೆ ಆಘಾತ: ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ನಟ, ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ (48) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣದಿಂದ ಸ್ಯಾಂಡಲ್‌ವುಡ್ ತಲ್ಲಣಗೊಂಡಿದ್ದು, ಕಲಾ ಲೋಕದಲ್ಲಿ ಶೋಕದ ಛಾಯೆ ಆವರಿಸಿದೆ.
ಘಟನೆಯ ವಿವರ: ಮನೆಯಲ್ಲಿದ್ದ ಸಂದರ್ಭದಲ್ಲಿ ದಿಲೀಪ್ ರಾಜ್ ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೂಲತಃ ಅರಸಿಕೆರೆಯವರಾದ ದಿಲೀಪ್ ರಾಜ್ ಅವರು ಹಿರಿಯ ರಂಗಕರ್ಮಿ ಹೆಚ್.ಎಂ. ಶಿವರುದ್ರಪ್ಪ ಅವರ ಪುತ್ರ.ಕೇವಲ ನಟನೆಯಷ್ಟೇ ಅಲ್ಲದೆ ತಾಂತ್ರಿಕವಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ನಟನೆಯ ಮೂಲಕ ಜನಪ್ರಿಯತೆ ಗಳಿಸಿದ್ದರು. ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ಹಾಗೂ ಇತ್ತೀಚಿನ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕ ಗಮನ ಸೆಳೆದಿದ್ದರು.ಕಿರುತೆರೆಯಲ್ಲಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕನಾಗಿ ಮಿಂಚಿದ್ದ ಅವರು, ‘ಪಾರು’ ಮತ್ತು ‘ನಾ ನಿನ್ನ ಬಿಡಲಾರೆ’ ಅಂತಹ ಹಿಟ್ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಿದ್ದರು.
ದಿಲೀಪ್ ರಾಜ್ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ ದೊಡ್ಡಣ್ಣ ಅವರು ಪ್ರತಿಕ್ರಿಯಿಸಿ ದಿಲೀಪ್ ರಾಜ್ ಅವರ ತಂದೆ ಮತ್ತು ನಮ್ಮ ಕುಟುಂಬದ ನಡುವೆ ದಶಕಗಳ ಬಾಂಧವ್ಯವಿತ್ತು. ಕಣ್ಣೆದುರೇ ಬೆಳೆದ ಮಗನಂತಿದ್ದ ಪ್ರತಿಭಾನ್ವಿತ ಕಲಾವಿದ ಇಷ್ಟು ಬೇಗ ನಿರ್ಗಮಿಸಿದ್ದು ಮನಸ್ಸಿಗೆ ಅತೀವ ನೋವು ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಸಣ್ಣ ವಯಸ್ಸಿನಲ್ಲೇ ಪ್ರತಿಭಾನ್ವಿತ ಕಲಾವಿದನೊಬ್ಬನನ್ನು ಕಳೆದುಕೊಂಡಿರುವುದು ಕನ್ನಡ ಕಲಾ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ.