ಡೈಲಿವಾರ್ತೆ: 13/ಮೇ/2026

35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಾಲ ಭೇದಿಸಿದ ಮೂಲ್ಕಿ ಪೊಲೀಸರು: ಕುಂದಾಪುರ ಕಾಲೇಜು ವಿದ್ಯಾರ್ಥಿನಿ ಬಂಧನ

ಮಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಮೂಲ್ಕಿ ಪೊಲೀಸರು ಬಂಧಿಸಿರುವ ಘಟನೆ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ.

ಬಂಧಿತ ಆರೋಪಿಯಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 42 ಗ್ರಾಂ ಹೈಡೋವಿಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತಳನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಸುಹಾನ (21) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.

ಮಂಗಳವಾರ (ಮೇ 12) ರಂದು ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆಕೆಯ ಬಳಿಯಿದ್ದ ಹೈಡೋವಿಡ್ ಗಾಂಜಾವನ್ನು ಪತ್ತೆ ಹಚ್ಚಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಆರೋಪಿತೆ ಚೆನ್ನೈಯಿಂದ ಮಾದಕ ವಸ್ತು ತರಿಸಿಕೊಂಡು ಕರಾವಳಿ ಭಾಗದಲ್ಲಿ ಮಾರಾಟ ಮಾಡುವ ಮೂಲಕ ಹಣ ಸಂಪಾದನೆ ಮಾಡಲು ಮುಂದಾಗಿದ್ದಳು ಎಂಬ ಮಾಹಿತಿ ಬಹಿರಂಗವಾಗಿದೆ. ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಹೈಡೋವಿಡ್ ಗಾಂಜಾ ಜಾಲ ಕಾರ್ಯನಿರ್ವಹಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಇದೇ ವೇಳೆ, ಆರೋಪಿತೆಯ ವಿರುದ್ಧ ಈ ಹಿಂದೆ ಕಾವೂರು ಪೊಲೀಸ್ ಠಾಣೆಯಲ್ಲಿ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ವಿಭಾಗದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಆಕೆ ಮಾದಕ ವಸ್ತು ಜಾಲದೊಂದಿಗೆ ಸಂಪರ್ಕ ಹೊಂದಿದ್ದಾಳೆಯೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪಣಂಬೂರು ಎಸಿಪಿ ನೇತೃತ್ವದ ತಂಡ ಹಾಗೂ ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸಂಯುಕ್ತ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.