ಡೈಲಿವಾರ್ತೆ: 14/ಮೇ/2026

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ವಾಪಸ್: ಧಾರ್ಮಿಕ ಸಂಕೇತಗಳ ಧರಿಸುವಿಕೆಗೆ ಸರ್ಕಾರದ ಹೊಸ ಆದೇಶ

ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ಕಳೆದ ಎರಡು ವರ್ಷಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ಹಿಜಾಬ್’ ವಿವಾದಕ್ಕೆ ರಾಜ್ಯ ಸರ್ಕಾರವು ತೆರೆ ಎಳೆದಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ 2022 ರಲ್ಲಿ ಅಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಹಿಜಾಬ್ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅಧಿಕೃತವಾಗಿ ಅನುಮತಿ ನೀಡಿದೆ.
​ಬುಧವಾರ ಸರ್ವಶಿಕ್ಷಣ ಅಭಿಯಾನದ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


​ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರ್ಧಾರ
​ಮಕ್ಕಳ ಹಿತದೃಷ್ಟಿಯಿಂದ ಮತ್ತು ಅವರಿಗೆ ಉಂಟಾಗುತ್ತಿರುವ ಮಾನಸಿಕ ಒತ್ತಡವನ್ನು ನಿವಾರಿಸಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಇತ್ತೀಚಿನ ಕೆಲವು ಘಟನೆಗಳಿಂದ ಧಾರ್ಮಿಕ ಸಂಕೇತಗಳನ್ನು ಧರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ, ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಎಲ್ಲಾ ಧರ್ಮದ ಸಾಂಪ್ರದಾಯಿಕ ವಸ್ತುಗಳಿಗೆ ಶಾಲಾ-ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 1 ರಿಂದ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಈ ಆದೇಶ ಅನ್ವಯವಾಗಲಿದೆ.


​ಅನುಮತಿ ನೀಡಲಾದ ಸಂಕೇತಗಳು
​ಹೊಸ ಆದೇಶದ ಪ್ರಕಾರ, ವಿದ್ಯಾರ್ಥಿಗಳು ತಮ್ಮ ನಿಗದಿಪಡಿಸಿದ ಸಮವಸ್ತ್ರದ ಜೊತೆಗೆ ಈ ಕೆಳಗಿನ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಬಹುದಾಗಿದೆ:
​ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ.
​ಶಿವದಾರ, ರುದ್ರಾಕ್ಷಿ. ತಲೆವಸ್ತ್ರ/ಹಿಜಾಬ್.
​ಆದರೆ, ಕೇಸರಿ ಶಾಲು ಧರಿಸಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ ಸಚಿವರು “ಇಲ್ಲ” ಎಂದು ಸ್ಪಷ್ಟಪಡಿಸಿದರು.


​ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಮುಖ ಅಂಶಗಳು:
​ಸಮವಸ್ತ್ರಕ್ಕೆ ಪೂರಕ: ಸಾಂಪ್ರದಾಯಿಕ ಸಂಕೇತಗಳು ನಿಗದಿತ ಸಮವಸ್ತ್ರದ ಮೂಲ ಉದ್ದೇಶವನ್ನು ವಿಫಲಗೊಳಿಸುವಂತಿರಬಾರದು ಮತ್ತು ಸಮವಸ್ತ್ರಕ್ಕೆ ಪೂರಕವಾಗಿರಬೇಕು.
​ಗುರುತಿಸುವಿಕೆಗೆ ಅಡ್ಡಿಯಾಗಬಾರದು: ಇವುಗಳು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಯಾವುದೇ ರೀತಿ ಅಡ್ಡಿಪಡಿಸಬಾರದು.
​ಪ್ರವೇಶ ನಿರಾಕರಣೆ ನಿಷೇಧ: ಇಂತಹ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ತರಗತಿ ಅಥವಾ ಪರೀಕ್ಷಾ ಕೊಠಡಿಯ ಪ್ರವೇಶವನ್ನು ನಿರಾಕರಿಸುವಂತಿಲ್ಲ.
​ಬಲವಂತಕ್ಕೆ ಅವಕಾಶವಿಲ್ಲ: ಇಂತಹ ಸಂಕೇತಗಳನ್ನು ಧರಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವಂತಿಲ್ಲ ಅಥವಾ ಧರಿಸಿದವರನ್ನು ಬಲವಂತವಾಗಿ ತೆಗೆಯುವಂತೆ ಸೂಚಿಸುವಂತಿಲ್ಲ.
​ಸಾಂವಿಧಾನಿಕ ಮೌಲ್ಯಗಳು: ಈ ಆದೇಶವು ಸಮಾನತೆ, ಘನತೆ, ಭಾತೃತ್ವ ಮತ್ತು ಜಾತ್ಯತೀತತೆಯಂತಹ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


​ಹೈಕೋರ್ಟ್‌ನ ಈ ಹಿಂದಿನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ನಾವು ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡುವುದಿಲ್ಲ. ಕಾನೂನು ತಜ್ಞರ ತಂಡ ಆ ವಿಷಯವನ್ನು ಗಮನಿಸಲಿದೆ ಎಂದು ಹೇಳಿದರು. ಈ ನಿರ್ಧಾರವು ರಾಜ್ಯದಾದ್ಯಂತ ಶೈಕ್ಷಣಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸರ್ಕಾರವು ಈ ಆದೇಶವನ್ನು ನಿಷ್ಪಕ್ಷಪಾತವಾಗಿ ಅನುಷ್ಠಾನಗೊಳಿಸಲು ಸೂಚಿಸಿದೆ.