ಡೈಲಿವಾರ್ತೆ: 13/ಮೇ/2026

ಕೇರಳ ಸಿಎಂ ಆಯ್ಕೆ ಹೈಡ್ರಾಮಕ್ಕೆ ತೆರೆ: ವಿ.ಡಿ. ಸತೀಶನ್‌ಗೆ ಕೇರಳ ಸಿಎಂ ಪಟ್ಟ

ನವದೆಹಲಿ: ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಒಳರಾಜಕೀಯ ಚರ್ಚೆಗೆ ಕಾರಣವಾಗಿದ್ದ ಕೇರಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದೆ. ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ . ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಆಯ್ಕೆ ಮಾಡಿದೆ.

ದೆಹಲಿಯಲ್ಲಿ ನಡೆದ ಸರಣಿ ಮಹತ್ವದ ಸಭೆಗಳ ಬಳಿಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಕೇರಳದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಸರ್ಕಾರ ರಚನೆಗೆ ಸಿದ್ಧವಾಗಿದ್ದರೂ, ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದ ರಾಜಕೀಯ ಹೈಡ್ರಾಮವೇ ನಿರ್ಮಾಣವಾಗಿತ್ತು.

102 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಯುಡಿಎಫ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ನಡುವೆ ಪ್ರಮುಖ ಪೈಪೋಟಿ ಕಂಡುಬಂದಿತ್ತು. ಇಬ್ಬರೂ ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ಒಲವು ಹೊಂದಿದ್ದರಿಂದ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ನಾಯಕತ್ವಕ್ಕೆ ದೊಡ್ಡ ಸವಾಲಾಗಿತ್ತು.

ಇದರ ನಡುವೆ ಯುಡಿಎಫ್ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವಿ.ಡಿ. ಸತೀಶನ್ ಪರ ಬಹಿರಂಗ ಬೆಂಬಲ ಸೂಚಿಸಿದ್ದೂ ರಾಜಕೀಯ ಲೆಕ್ಕಾಚಾರದಲ್ಲಿ ಮಹತ್ವ ಪಡೆದುಕೊಂಡಿತ್ತು.
ಎಲ್‌ಡಿಎಫ್ ಸರ್ಕಾರದ ವಿರುದ್ಧ ವಿಧಾನಸಭೆಯೊಳಗೂ ಹೊರಗೂ ಆಕ್ರಮಣಕಾರಿ ಧೋರಣೆಯಿಂದ ಗಮನ ಸೆಳೆದಿದ್ದ ಸತೀಶನ್, ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಬೇರೆ ಯಾವುದೇ ಸಚಿವ ಸ್ಥಾನ ಸ್ವೀಕರಿಸುವುದಿಲ್ಲ ಎಂಬ ಕಟ್ಟುನಿಟ್ಟಿನ ನಿಲುವು ತಳೆದಿದ್ದರು ಎನ್ನಲಾಗಿದೆ. ಈ ನಿಲುವು ಪಕ್ಷದ ಒಳಚರ್ಚೆಗಳಲ್ಲಿ ಹೆಚ್ಚಿನ ಒತ್ತಡ ಸೃಷ್ಟಿಸಿತ್ತು.
ಇನ್ನೊಂದೆಡೆ ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ್ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ಶಾಸಕರ ಬಹುಮತ ಬೆಂಬಲ ಸತೀಶನ್ ಹಾಗೂ ವೇಣುಗೋಪಾಲ್ ಪರ ಹರಿದ ಹಿನ್ನೆಲೆ, ಅಂತಿಮ ಹಂತದಲ್ಲಿ ಅವರು ಪೈಪೋಟಿಯಿಂದ ಹಿಂದೆ ಸರಿದಿದ್ದರು.
ಮೂವರು ನಾಯಕರ ಪೈಕಿ ಯಾರನ್ನೇ ಆಯ್ಕೆ ಮಾಡಿದರೂ ಪಕ್ಷದಲ್ಲಿ ಬಣ ರಾಜಕೀಯ ತೀವ್ರಗೊಳ್ಳುವ ಆತಂಕ ಕಾಂಗ್ರೆಸ್ ಹೈಕಮಾಂಡ್‌ನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ಎಲ್ಲರನ್ನು ಸಮಾಧಾನಪಡಿಸುವ ಸೂತ್ರದ ಹುಡುಕಾಟದಲ್ಲಿ ದೆಹಲಿಯಲ್ಲಿ ಸುದೀರ್ಘ ಚರ್ಚೆಗಳು ನಡೆದಿದ್ದವು.

ಮುಖ್ಯಮಂತ್ರಿ ಆಯ್ಕೆ ವಿಳಂಬವಾಗುತ್ತಿದ್ದಂತೆ ಕೇರಳದ ಹಲವು ಭಾಗಗಳಲ್ಲಿ, ವಿಶೇಷವಾಗಿ ವಯನಾಡ್ ಪ್ರದೇಶದಲ್ಲಿ ನಾಯಕರ ಪರ-ವಿರೋಧ ಪೋಸ್ಟರ್‌ಗಳು ಕಾಣಿಸಿಕೊಂಡು ಕಾಂಗ್ರೆಸ್‌ನ ಒಳಜಗಳ ಬಹಿರಂಗವಾಗಿತ್ತು. ಅಂತಿಮವಾಗಿ ಹೈಕಮಾಂಡ್ ವಿ.ಡಿ. ಸತೀಶನ್ ಹೆಸರಿನ ಮೇಲೆ ಒಮ್ಮತ ಸಾಧಿಸುವ ಮೂಲಕ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆದಿದೆ.