



ಡೈಲಿವಾರ್ತೆ: 14/ಮೇ/2026

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಎಸ್‌ಐಆರ್ ಜಾರಿ; ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

ನವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಕೈಗೊಳ್ಳಲು ಆದೇಶಿಸಿದೆ.
ಈ ಮಹತ್ವದ ಅಭಿಯಾನದಲ್ಲಿ ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸುವುದರ ಜೊತೆಗೆ ಮರಣ ಹೊಂದಿದವರು ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವ ನಕಲಿ ಮತದಾರರ ವಿವರಗಳನ್ನು ತೆಗೆದುಹಾಕುವ ಕಾರ್ಯ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾತನಾಡಿ, ಮತದಾರರು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ. ದೇಶಾದ್ಯಂತ ಸುಮಾರು 36.73 ಕೋಟಿ ಮತದಾರರನ್ನು ಈ ಹಂತದಲ್ಲಿ ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಲಾಗಿದೆ. ಅಂದರೆ, ಈ ದಿನಾಂಕದೊಳಗೆ 18 ವರ್ಷ ಪೂರೈಸಿದ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಲಿದ್ದಾರೆ.
ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳಲ್ಲಿ ಮಾತ್ರ ಭೌಗೋಳಿಕ ಮತ್ತು ಹವಾಮಾನ ಸವಾಲುಗಳ ಹಿನ್ನೆಲೆ ಎಸ್‌ಐಆರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹಿಮಪಾತ ಪೀಡಿತ ಹಾಗೂ ಎತ್ತರ ಪ್ರದೇಶಗಳ ಕಾರ್ಯಾಚರಣಾ ಅಡಚಣೆಗಳನ್ನು ಪರಿಗಣಿಸಿ ಬಳಿಕ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಎಸ್‌ಐಆರ್ ನಡೆಯಲಿರುವ ರಾಜ್ಯಗಳು:
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಪರಿಷ್ಕರಣೆ ನಡೆಯಲಿದೆ.
ಜೊತೆಗೆ ದೆಹಲಿ, ಚಂಡೀಗಢ ಹಾಗೂ ದಾದ್ರಾ ಮತ್ತು ನಗರ ಹವೇಲಿ–ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳೂ ಈ ಪ್ರಕ್ರಿಯೆಯ ವ್ಯಾಪ್ತಿಗೆ ಒಳಪಡಲಿವೆ.