



ಡೈಲಿವಾರ್ತೆ: 14/ಮೇ/2026

ಕುಂದಾಪುರ: ವರುಣನ ಮೊದಲ ಆರ್ಭಟಕ್ಕೆ ಬಲಿಯಾದ ಕಾರ್ಮಿಕ – ಅರಾಟೆ ಸೇತುವೆ ಮೇಲೆ ಸಿಡಿಲು ಬಡಿದು ಪಂಜಾಬ್ ನಿವಾಸಿ ಸಾವು

ಕುಂದಾಪುರ: ತಾಲೂಕಿನಾದ್ಯಂತ ಗುರುವಾರ ಸಂಜೆ ಸಂಭವಿಸಿದ ದಿಢೀರ್ ಹವಾಮಾನ ವೈಪರೀತ್ಯ ಹಾಗೂ ಸಿಡಿಲು ಸಹಿತ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರ್ಮಿಕನೊಬ್ಬ ಬಲಿಯಾದ ಘಟನೆ ತ್ರಾಸಿ ಸಮೀಪದ ಮುಳ್ಳಿಕಟ್ಟೆಯ ಅರಾಟೆ ಸೇತುವೆಯ ಮೇಲೆ ಸಂಭವಿಸಿದೆ.
ಪಂಜಾಬ್ ಮೂಲದ ಐ.ಆರ್.ಬಿ (IRB) ಕಂಪನಿಯ ಕಾರ್ಮಿಕ ಅಶಿತೋಷ್ ಸಿಂಗ್ (35) ಮೃತಪಟ್ಟ ದುರ್ದೈವಿ. ಇವರೊಂದಿಗೆ ಇದ್ದ ಮತ್ತೊಬ್ಬ ಕಾರ್ಮಿಕ ನವಜ್ಯೋತ್ ಸಿಂಗ್ (37) ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಬಹಳ ದಿನಗಳ ನಿರೀಕ್ಷೆಯ ನಂತರ ಕುಂದಾಪುರ ಪರಿಸರದಲ್ಲಿ ಗುರುವಾರ ಸಂಜೆ ಏಕಾಏಕಿ ಗಾಳಿ, ಭೀಕರ ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ಮಳೆ ಆರಂಭವಾಗಿತ್ತು. ಈ ವೇಳೆ ಅರಾಟೆ ಹಳೆ ಸೇತುವೆಯ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ವೀಕ್ಷಣೆಗಾಗಿ ಅಶಿತೋಷ್ ಹಾಗೂ ನವಜ್ಯೋತ್ ಸಿಂಗ್ ಅವರು ಸೇತುವೆಯ ಮೇಲಿದ್ದರು. ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಅನಿರೀಕ್ಷಿತವಾಗಿ ಅಪ್ಪಳಿಸಿದ ಪ್ರಬಲ ಸಿಡಿಲು ಅಶಿತೋಷ್ ಅವರ ಮೇಲೆ ಬಡಿದಿದೆ. ಸಿಡಿಲಿನ ತೀವ್ರತೆಗೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆಯ ಮೊದಲ ಹಂತದಲ್ಲೇ ಇಂತಹ ಘೋರ ದುರಂತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.