ಡೈಲಿವಾರ್ತೆ: 16/ಮೇ/2026

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಮೇ 26ಕ್ಕೆ ಕೇರಳಕ್ಕೆ ಮಾರುತಗಳ ಆಗಮನ ಸಾಧ್ಯತೆ​

ನವದೆಹಲಿ: ದೇಶದ ಕೃಷಿ ವಲಯ ಹಾಗೂ ಆರ್ಥಿಕತೆಯ ದಿಕ್ಸೂಚಿಯಾಗಿರುವ ನೈರುತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮುಂಚಿತವಾಗಿ ಅಂದರೆ, ಮೇ 26ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.​

ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ರಂದು ಮುಂಗಾರು ಕೇರಳವನ್ನು ಸ್ಪರ್ಶಿಸುವುದು ವಾಡಿಕೆ. ಆದರೆ ಈ ಬಾರಿ ಪರಿಸ್ಥಿತಿಗಳಲ್ಲಿ ಕೆಲ ಏರುಪೇರುಗಳಿದ್ದು, ವಾಡಿಕೆಗಿಂತ ನಾಲ್ಕು ದಿನ ಮುಂಚಿತವಾಗಿ ಅಥವಾ ನಾಲ್ಕು ದಿನ ತಡವಾಗಿ ಮುಂಗಾರು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕಳೆದ ವರ್ಷ ಮೇ 24ರಂದೇ ಮುಂಗಾರು ಕೇರಳಕ್ಕೆ ಲಗ್ಗೆ ಇಟ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.​ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಮುಂಗಾರು ಪ್ರವೇಶಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಮಾರುತಗಳು ಉತ್ತರದ ಕಡೆಗೆ ಸಾಗುತ್ತಿದ್ದಂತೆ, ಪ್ರಸ್ತುತ ದೇಶದ ಹಲವೆಡೆ ತೀವ್ರವಾಗಿರುವ ಬೇಸಿಗೆಯ ಬಿಸಿಲ ಝಳ ಮತ್ತು ತಾಪಮಾನ ಗಣನೀಯವಾಗಿ ತಗ್ಗಲಿದೆ ಎಂದು ಇಲಾಖೆ ತಿಳಿಸಿದೆ.​

ಎಲ್ ನಿನೊ ನೆರಳು: ಕೃಷಿ ವಲಯಕ್ಕೆ ಆತಂಕದ ಮುನ್ಸೂಚನೆ?​

ಮುಂಗಾರು ಮಾರುತಗಳ ಆರಂಭಿಕ ಮುನ್ನಡೆ ಸಮಾಧಾನ ತಂದಿದ್ದರೂ, ಮಳೆಯ ಒಟ್ಟಾರೆ ಪ್ರಮಾಣದ ಕುರಿತು ಐಎಂಡಿ ನೀಡಿರುವ ವರದಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಜಾಗತಿಕ ಹವಾಮಾನ ವಿದ್ಯಮಾನವಾದ ‘ಎಲ್ ನಿನೊ’ ಪ್ರಭಾವದ ಹಿನ್ನೆಲೆಯಲ್ಲಿ ಈ ವರ್ಷ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಎಚ್ಚರಿಸಿದೆ.

ದೇಶದಲ್ಲಿ 1971ರಿಂದ 2020ರವರೆಗಿನ ಅವಧಿಯಲ್ಲಿ ಮುಂಗಾರು ಋತುವಿನಲ್ಲಿ ಸರಾಸರಿ 87 ಸೆಂ.ಮೀ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಅದು 80 ಸೆಂ.ಮೀ ಗೆ ಕುಸಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.​ಆರ್ಥಿಕತೆಯ ಮೇಲೆ ಬೀರಲಿದೆ ಗಾಢ ಪರಿಣಾಮ​ಭಾರತದಲ್ಲಿ ವಾರ್ಷಿಕವಾಗಿ ಬೀಳುವ ಒಟ್ಟು ಮಳೆಯಲ್ಲಿ ಶೇಕಡಾ 70ರಷ್ಟು ಮಳೆಯು ಮುಂಗಾರಿನ ನಾಲ್ಕು ತಿಂಗಳ ಅವಧಿಯಲ್ಲೇ ದಾಖಲಾಗುತ್ತದೆ. ದೇಶದ ಬಹುಪಾಲು ಕೃಷಿ ಚಟುವಟಿಕೆಗಳು ಮತ್ತು ಗ್ರಾಮೀಣ ಆರ್ಥಿಕತೆ ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿವೆ. ಹೀಗಾಗಿ, ಈ ಬಾರಿ ಮಳೆ ಕೊರತೆಯಾಗಲಿದೆಯೇ ಅಥವಾ ಕೃಷಿ ವಲಯದ ಮೇಲೆ ಇದು ಎಂತಹ ಪರಿಣಾಮ ಬೀರಲಿದೆ ಎಂಬುದು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸಲಿದೆ.​