



ಡೈಲಿವಾರ್ತೆ: 16/ಮೇ/2026

ಉಡುಪಿ: ನೇಜಾರಿನಲ್ಲಿ ಕಾರು ಡಿಕ್ಕಿ- ಆರನೇ ತರಗತಿ ವಿದ್ಯಾರ್ಥಿ ದುರ್ಮರಣ

ಉಡುಪಿ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಆರನೇ ತರಗತಿ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಗಂಭೀರ ಘಟನೆ ಉಡುಪಿ ಜಿಲ್ಲೆಯ ನೇಜಾರಿನ ಜ್ಯೋತಿನಗರದ ಆರನೇ ಕ್ರಾಸ್ ಸಮೀಪ ಸಂಭವಿಸಿದೆ.
ನೇಜಾರು ನಿವಾಸಿ, 12 ವರ್ಷದ ಅಬ್ದುಲ್ ರೆಹಮಾನ್ ಮೃತಪಟ್ಟ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಬಾಲಕ ಅಬ್ದುಲ್ ರೆಹಮಾನ್ ಜ್ಯೋತಿನಗರದ ಆರನೇ ಕ್ರಾಸ್ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಅತಿಯಾದ ವೇಗದಿಂದ ಬಂದ ಕಾರೊಂದು ಬಾಲಕನಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಾಲಕ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಎನ್ನಲಾಗಿದೆ.
ತಕ್ಷಣವೇ ಸ್ಥಳೀಯರು ಮತ್ತು ಸಾರ್ವಜನಿಕರ ಸಹಾಯದಿಂದ ಗಾಯಾಳು ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಯಿತಾದರೂ, ತಲೆ ಹಾಗೂ ದೇಹದ ಒಳಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮೃತ ಅಬ್ದುಲ್ ರೆಹಮಾನ್ ಸ್ಥಳೀಯ ಸಲಿಹಾತ್ ಶಿಕ್ಷಣ ಸಂಸ್ಥೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆತ ಶಾಲೆಯಲ್ಲಿ ಅತ್ಯಂತ ಪ್ರತಿಭಾವಂತ ಹಾಗೂ ಸೌಮ್ಯ ಸ್ವಭಾವದ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ. ಬಾಲಕನ ಅಕಾಲಿಕ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಹಪಾಠಿ ವಿದ್ಯಾರ್ಥಿಗಳು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.