ಡೈಲಿವಾರ್ತೆ: 16/ಮೇ/2026

ಹಾಸನ: ಹೊತ್ತಿ ಉರಿದ ಸ್ಲೀಪರ್ ಕೋಚ್ – ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ 36 ಪ್ರಯಾಣಿಕರು!

​ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಶುಕ್ರವಾರ ತಡರಾತ್ರಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಆದರೆ, ಚಾಲಕನ ಅದ್ಭುತ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ 36 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶವಾಗಿ ಪಾರಾದ ಘಟನೆ ​ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.

​ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ‘ಭರತ್’ ಕಂಪನಿಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ಶಾಂತಿಗ್ರಾಮದ ಬಳಿ ತಲುಪಿದಾಗ, ಹಿಂಬದಿಯ ಟೈರ್ ಭಾಗದಲ್ಲಿ ತಾಂತ್ರಿಕ ದೋಷದಿಂದಾಗಿ ಅಚಾನಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಲಿಸುತ್ತಿರುವಾಗಲೇ ಟೈರ್ ಭಾಗದಿಂದ ಅಸಹಜ ಶಬ್ದ ಮತ್ತು ದಟ್ಟವಾದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತನಾದ ಆತ, ಬಸ್ ವೇಗವನ್ನು ತಗ್ಗಿಸಿ ರಸ್ತೆಯ ಪಕ್ಕ ಸುರಕ್ಷಿತ ಜಾಗದಲ್ಲಿ ವಾಹನವನ್ನು ನಿಲ್ಲಿಸಿದ್ದಾನೆ.

​ಬಸ್ ನಿಲ್ಲಿಸಿದ ತಕ್ಷಣ ಬೆಂಕಿ ತೀವ್ರವಾಗುತ್ತಿರುವುದನ್ನು ಕಂಡ ಚಾಲಕ, ಸಾಮಗ್ರಿಗಳನ್ನು ರಕ್ಷಿಸುವ ಗೋಜಿಗೆ ಹೋಗದೆ ಪ್ರಯಾಣಿಕರ ಜೀವ ಉಳಿಸಲು ಮೊದಲ ಆದ್ಯತೆ ನೀಡಿದ್ದಾನೆ. ಆ ಸಮಯದಲ್ಲಿ ಬಸ್‌ನೊಳಗಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ, ಜೋರಾಗಿ ಕೂಗಿ ಎಲ್ಲರನ್ನೂ ಎಬ್ಬಿಸಿ, ತಕ್ಷಣವೇ ಬಸ್‌ನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾನೆ.
​ಚಾಲಕನ ಎಚ್ಚರಿಕೆಯ ಕರೆಗೆ ಓಗೊಟ್ಟು 36 ಪ್ರಯಾಣಿಕರು ಲಗೇಜ್‌ಗಳನ್ನೂ ಲೆಕ್ಕಿಸದೆ ಒಬ್ಬೊಬ್ಬರಾಗಿ ಕೆಳಗಿಳಿದು ದೂರ ಸರಿದಿದ್ದಾರೆ. ಪ್ರಯಾಣಿಕರು ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಬಸ್ ಅನ್ನು ಆವರಿಸಿಕೊಂಡಿದೆ.

​ಬೆಂಕಿ ತೀವ್ರ ರಭಸದಿಂದ ಇಡೀ ಬಸ್‌ಗೆ ವ್ಯಾಪಿಸುತ್ತಿದ್ದಂತೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇರತರ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಗೊಂಡರು. ತಕ್ಷಣವೇ ಶಾಂತಿಗ್ರಾಮ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲೇ ಇಡೀ ಬಸ್ ಒಳಗಿನ ಸೀಟುಗಳು, ಸ್ಲೀಪರ್ ಕೋಚ್ ವಿಭಾಗ ಹಾಗೂ ಪ್ರಯಾಣಿಕರ ಲಗೇಜ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದವು.
​ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆದ್ದಾರಿಯಲ್ಲಿ ಕೆಲಕಾಲ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದರು.