ಡೈಲಿವಾರ್ತೆ: 21/ಮೇ/2026

ಕೋಟೇಶ್ವರದಲ್ಲಿ ‘ಚಿರಂತನ ವಿದ್ಯಾಸಂಸ್ಥೆ’ ಲೋಕಾರ್ಪಣೆ:
ಕಟ್ಟಕಡೆಯ ಮಗುವಿಗೆ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ -ಮಾಜಿ ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ

ಕುಂದಾಪುರ, ಮೇ 21: ಸಮಾಜದ ಕಟ್ಟಕಡೆಯ ಮಗುವೂ ಶಿಕ್ಷಣವಂತನಾದಾಗ ಮಾತ್ರ ನಿಜವಾದ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಕಡುಬಡತನದಲ್ಲಿರುವವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುವ ಸತ್ಕಾರ್ಯವನ್ನು ದೇವರು ಮೆಚ್ಚುತ್ತಾನೆ ಎಂದು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕೋಟೇಶ್ವರದಲ್ಲಿ ನೂತನವಾಗಿ ಆರಂಭಗೊಂಡ ‘ಚಿರಂತನ ವಿದ್ಯಾಸಂಸ್ಥೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿ ಸಂಸ್ಥೆಯ ಸಂಸ್ಥಾಪಕಿ ಡಾ. ಚಿಂತನಾ ಅವರು ಮಕ್ಕಳ ಶಿಕ್ಷಣದ ಕುರಿತು ವಿಶೇಷ ಕಾಳಜಿ ಮತ್ತು ಧೀಮಂತ ಉದ್ದೇಶವನ್ನು ಹೊಂದಿದ್ದು, ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಲು ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲೋಚನಾ ಸರ್ವೋತ್ತಮ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾನಸಿಕ ತಜ್ಞ ಡಾ. ಪ್ರಕಾಶ್ ತೊಳಾರ್, “ನರ್ಸರಿಯಿಂದ ಪಿಯುಸಿ ವರೆಗಿನ ಅವಧಿಯಲ್ಲಿ ಮಕ್ಕಳಿಗೆ ಗುಣಮಟ್ಟದ ತರಬೇತಿಯ ಅಗತ್ಯವಿದೆ. ಶಿಕ್ಷಕರು ಮಕ್ಕಳಲ್ಲಿನ ಕಲಿಕಾ ನ್ಯೂನತೆಗಳನ್ನು ಆರಂಭದಲ್ಲೇ ಗುರುತಿಸಿ, ಅವರ ಆಸಕ್ತಿಗೆ ಅನುಗುಣವಾಗಿ ಬೋಧಿಸಬೇಕು. ಪೋಷಕರು ತಮ್ಮ ಅಪೇಕ್ಷೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು ಎಂದು ಕಿವಿಮಾತು ಹೇಳಿದರು.

ಮುಂದುವರಿದು ಮಾತನಾಡಿದ ಅವರು ಐದು ವರ್ಷದ ಮಕ್ಕಳ ಹಠವನ್ನು ಪೋಷಕರು ಅತಿ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಮಕ್ಕಳ ಆಹಾರ ಕ್ರಮ ಹಾಗೂ ಬೆಳವಣಿಗೆಯ ಕುರಿತು ಅನಗತ್ಯ ಆತಂಕ ಬೇಡ. ಮಹಾನ್ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ಶಿಕ್ಷಕರು ತಿರಸ್ಕರಿಸಿದಾಗಲೂ ಅವರ ತಾಯಿಯ ಪ್ರೋತ್ಸಾಹವೇ ಅವರನ್ನು ಜಗತ್ತಿನ ಶ್ರೇಷ್ಠ ವಿಜ್ಞಾನಿಯನ್ನಾಗಿ ಮಾಡಿತು. ಪ್ರತಿ ಮಗುವಿನಲ್ಲೂ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಡಿಜಿಟಲ್ ವ್ಯಸನ ಹಾಗೂ ಮಾದಕ ದ್ರವ್ಯಗಳ ಅಪಾಯ

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಪಿಡುಗುಗಳ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ ಡಾ. ತೊಳಾರ್ ಪೋಷಕರು ಮಕ್ಕಳ ಎದುರು ದಿನವಿಡೀ ಮೊಬೈಲ್ ಬಳಕೆಯಲ್ಲಿ ಮುಳುಗಿರಬಾರದು. ಮನೆಯಲ್ಲಿ ಕಡ್ಡಾಯವಾಗಿ ‘ಮೊಬೈಲ್‌ರಹಿತ ಸಮಯ’ವನ್ನು ಪಾಲಿಸಬೇಕು. ಕುಂದಾಪುರ ಭಾಗದಲ್ಲಿ ಮಾದಕ ವ್ಯಸನದ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಮಕ್ಕಳಿಗೆ ನೀಡುವ ಹಣ ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬುದರ ಮೇಲೆ ತೀಕ್ಷ್ಣ ನಿಗಾ ಇಡಬೇಕು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ನೂತನ ಶಿಕ್ಷಕರ ತರಬೇತಿ ಕೇಂದ್ರವನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಮೊಳಹಳ್ಳಿ ಕಮಲಕಿಶೋರ್ ಹೆಗ್ಡೆ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯೇ ಧೇಯ

ಸಂಸ್ಥೆಯ ಉದ್ದೇಶಗಳ ಕುರಿತು ಮಾತನಾಡಿದ ಸಂಸ್ಥಾಪಕಿ ಡಾ. ಚಿಂತನಾ ರಾಜೇಶ್ ಕುಟುಂಬದ ನಿರಂತರ ಸಹಕಾರ ಹಾಗೂ ತಜ್ಞರ ತಂಡದ ಶ್ರಮದಿಂದ ಚಿರಂತನ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಗುಣಮಟ್ಟದ ಶಿಕ್ಷಣ ಮತ್ತು ಅರ್ಥಪೂರ್ಣ ಸೇವೆಯೇ ನಮ್ಮ ಮುಖ್ಯ ಧೇಯ. ಈಗಾಗಲೇ ಶಿಕ್ಷಕರ ತರಬೇತಿಯ ಎರಡು ಬ್ಯಾಚ್‌ಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳು ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಈ ಕೇಂದ್ರವನ್ನು ಶಿಕ್ಷಕರ ಕೌಶಲ್ಯಾಭಿವೃದ್ಧಿಯ ಜೊತೆಗೆ, ಮಕ್ಕಳು ಹಾಗೂ ಹದಿಹರೆಯದವರ ಸಮಗ್ರ ಮಾರ್ಗದರ್ಶನ ಕೇಂದ್ರವನ್ನಾಗಿ ರೂಪಿಸಲಾಗುವುದು. ಜೊತೆಗೆ, ವಿವಿಧ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಮರು ಅವಕಾಶ ಕಲ್ಪಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿರಾ ಶೆಟ್ಟಿ ಸ್ವಾಗತಿಸಿ, ವಿನುತಾ ಶೆಟ್ಟಿ ವಂದನಾರ್ಪಣೆ ನೆರವೇರಿಸಿದರು. ಸ್ಥಳೀಯ ಪ್ರಮುಖರು ಹಾಗೂ ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.