




ಡೈಲಿವಾರ್ತೆ: 21/ಮೇ/2026


ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ: ಐದೇ ದಿನದಲ್ಲಿ ಬಿಜೆಪಿ ಹಿಂದಿಕ್ಕಿ 10 ಮಿಲಿಯನ್ ಫಾಲೋವರ್ಸ್ ಗಳಿಸಿದ ‘ಕಾಕ್ರೋಚ್ ಜನತಾ ಪಕ್ಷ’

ಬೆಂಗಳೂರು: ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಸದ್ಯ ಸಾಮಾಜಿಕ ಮಾಧ್ಯಮದ ಹೊಸ ಅಭಿಯಾನವೊಂದು ಭಾರಿ ಸಂಚಲನ ಸೃಷ್ಟಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಇತ್ತೀಚೆಗೆ ನಿರುದ್ಯೋಗಿ ಯುವಕರಿಗೆ ಸಂಬಂಧಿಸಿದಂತೆ ನೀಡಿದ ಮಹತ್ವದ ಹೇಳಿಕೆಗಳಿಂದ ಪ್ರೇರಿತಗೊಂಡು ಆರಂಭವಾಗಿರುವ ‘ಕಾಕ್ರೋಚ್ ಜನತಾ ಪಕ್ಷ’ (CJP) ಎಂಬ ವಿಡಂಬನಾತ್ಮಕ ಇನ್‌ಸ್ಟಾಗ್ರಾಮ್ ಖಾತೆಯು ಕೇವಲ ಐದು ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ (1 ಕೋಟಿ) ಫಾಲೋವರ್ಸ್‌ಗಳನ್ನು ಗಳಿಸುವ ಮೂಲಕ ದೇಶದ ಆಡಳಿತಾರೂಢ ಬಿಜೆಪಿಯ ಅಧಿಕೃತ ಖಾತೆಯನ್ನೇ ಹಿಂದಿಕ್ಕಿದೆ.
ಇದು ಯಾವುದೇ ನೋಂದಾಯಿತ ರಾಜಕೀಯ ಪಕ್ಷವಲ್ಲದಿದ್ದರೂ, ಯುವ ಸಮುದಾಯದ ಧ್ವನಿಯಾಗಿ ಮೂಡಿಬಂದಿರುವ ಒಂದು ಡಿಜಿಟಲ್ ವೇದಿಕೆಯಾಗಿದೆ.
ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ಆಡಳಿತ ಪಕ್ಷ ಬಿಜೆಪಿಯು 8.7 ಮಿಲಿಯನ್ ಹಾಗೂ ಆಮ್ ಆದ್ಮಿ ಪಕ್ಷ (AAP) 1.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ 13.2 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಈಗ ಕೇವಲ 5 ದಿನಗಳ ಹಿಂದೆ ಆರಂಭವಾದ ಸಿಜೆಪಿ (@cockroachjantaparty) 10 ಮಿಲಿಯನ್ ಗಡಿ ದಾಟಿ ದ್ವಿತೀಯ ಸ್ಥಾನಕ್ಕೆ ಜಿಗಿದಿರುವುದು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ.
ಸಿಜೆಪಿ ಉಗಮಕ್ಕೆ ಕಾರಣವಾದ ಸುಪ್ರೀಂ ಕೋರ್ಟ್ ಹೇಳಿಕೆ:
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದರ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೇಶದಲ್ಲಿ ‘ಉದ್ಯೋಗದ ಹಕ್ಕಿನ’ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದರು. 21 ರಿಂದ 60 ವರ್ಷದೊಳಗಿನ ಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಠ ವೇತನದೊಂದಿಗೆ ಉದ್ಯೋಗ ಸಿಗಬೇಕು, ಒಂದು ವೇಳೆ ಸರ್ಕಾರಗಳು ಉದ್ಯೋಗ ನೀಡಲು ವಿಫಲವಾದರೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಈ ಗಂಭೀರ ಆಶಯವನ್ನು ಬೆಂಬಲಿಸಿ, ಸಾಮಾಜಿಕ ಕಾರ್ಯಕರ್ತ ಅಭಿಜೀತ್ ದಿಪ್ಕೆ ಅವರು ಮೇ 16 ರಂದು ಈ ವಿಡಂಬನಾತ್ಮಕ ರಾಜಕೀಯ ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭಿಸಿದರು. ಮೊದಲು ‘ಎಕ್ಸ್’ (ಟ್ವಿಟರ್) ವೇದಿಕೆಯಲ್ಲಿ ಹಾಸ್ಯ ಮತ್ತು ವ್ಯಂಗ್ಯದ ರೂಪದಲ್ಲಿ ಆರಂಭವಾದ ಈ ಚಳುವಳಿ, ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ದ್ರುತಗತಿಯಲ್ಲಿ ವೈರಲ್ ಆಯಿತು.
ಯುವ ಜನರ ಸಮಸ್ಯೆಗಳೇ ಪ್ರಮುಖ ಅಸ್ತ್ರ:
’ಯುವಕರ, ಯುವಕರಿಗಾಗಿ ಮತ್ತು ಯುವಕರಿಂದ’ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಈ ಡಿಜಿಟಲ್ ವೇದಿಕೆಯು ದೇಶದ ಪ್ರಸ್ತುತ ಜ್ವಲಂತ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತಿದೆ. ಮುಖ್ಯವಾಗಿ ದೇಶವನ್ನು ಕಾಡುತ್ತಿರುವ ತೀವ್ರ ನಿರುದ್ಯೋಗ ಸಮಸ್ಯೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ರಾಜಕೀಯ ನಾಯಕರ ಹೊಣೆಗಾರಿಕೆಯ ಕೊರತೆ ಸೇರಿದಂತೆ ಯುವ ಪೀಳಿಗೆಯ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದ ವಿಷಯಗಳ ಕುರಿತು ಇದು ಗಂಭೀರ ಚರ್ಚೆ ಹಾಗೂ ಜಾಗೃತಿ ಮೂಡಿಸುತ್ತಿದೆ. ಹೀಗಾಗಿಯೇ ಇದು ಅಲ್ಪಾವಧಿಯಲ್ಲಿ ದೇಶದ ಕೋಟ್ಯಂತರ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ರಾಷ್ಟ್ರ ನಾಯಕರ, ಪ್ರಮುಖರ ಬೆಂಬಲ:
ಈ ವಿಭಿನ್ನ ಆನ್‌ಲೈನ್ ಚಳುವಳಿಗೆ ದೇಶದ ಪ್ರಮುಖ ಗಣ್ಯರು ಮತ್ತು ರಾಜಕೀಯ ನಾಯಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಥಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಸೇರಿದಂತೆ ಹಲವರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಆಸಕ್ತಿ ತೋರ್ಪಡಿಸಿದ್ದಾರೆ.
ವಿಶೇಷವಾಗಿ ದೇಶಾದ್ಯಂತ ಸದ್ದು ಮಾಡುತ್ತಿರುವ ‘ನೀಟ್’ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ದೇಶದ ಯುವಕರು ಧ್ವನಿ ಎತ್ತಲು ಈ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕರೆ ನೀಡಿದ್ದಾರೆ. ಪತ್ರಿಕೆ ಸೋರಿಕೆಯ ಹೊಣೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಹೊರಬೇಕು ಎಂದು ಆಗ್ರಹಿಸಿರುವ ಅವರು, ಈ ಹೋರಾಟ ತೀವ್ರಗೊಳ್ಳಲು ಸಿಜೆಪಿ ಖಾತೆಯ ಅನುಯಾಯಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಈ ಅಭಿಯಾನವು ಮುಂಬರುವ ದಿನಗಳಲ್ಲಿ ಯುವ ರಾಜಕಾರಣ ಮತ್ತು ಸರ್ಕಾರದ ನೀತಿಗಳ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.