




ಡೈಲಿವಾರ್ತೆ: 24/ಮೇ/2026


ಭಟ್ಕಳದಲ್ಲಿ ಮಹಾ ದುರಂತ: ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ಭಾನುವಾರ ಅತ್ಯಂತ ಭೀಕರ ಹಾಗೂ ಕರುಣಾಜನಕ ದುರಂತವೊಂದು ಸಂಭವಿಸಿದೆ. ಜೀವನೋಪಾಯಕ್ಕಾಗಿ ನದಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರಿನ ರಭಸಕ್ಕೆ ಸಿಲುಕಿ ಜಲಸಮಾಧಿಯಾದ ದಾರುಣ ಘಟನೆ ಶಿರಾಲಿಯ ಅಳ್ವೆಕೋಡಿ ಸಮೀಪದ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ನಡೆದಿದೆ.
ಸರಪಳಿಯಂತೆ ಸಾಗುತ್ತಿದ್ದಾಗ ಸಂಭವಿಸಿತು ದುರಂತ:
ಸ್ಥಳೀಯ ನಿವಾಸಿಗಳಾಗಿರುವ ಈ ಕುಟುಂಬದ ಸದಸ್ಯರು ನದಿಯಲ್ಲಿ ಕಪ್ಪೆಚಿಪ್ಪು (ಚಪ್ಪೆಕಲ್ಲು) ಸಂಗ್ರಹಿಸಲು ತೆರಳಿದ್ದರು. ನದಿಯ ಆಳ ಮತ್ತು ನೀರಿನ ಹರಿವನ್ನು ಅಂದಾಜಿಸಿ, ಸುರಕ್ಷತೆಯ ದೃಷ್ಟಿಯಿಂದ ಒಬ್ಬರ ಕೈಯನ್ನು ಮತ್ತೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ನದಿಯಲ್ಲಿ ಮುನ್ನಡೆಯುತ್ತಿದ್ದರು. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ನೀರಿನ ತೀವ್ರ ಆವೇಗಕ್ಕೆ ಸಿಲುಕಿ ಒಬ್ಬರು ನಿಯಂತ್ರಣ ತಪ್ಪುತ್ತಿದ್ದಂತೆ, ಇಡೀ ಸರಪಳಿ ಕಳಚಿ ಎಂಟೂ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಏಕಾಏಕಿ ಹೆಚ್ಚಿದ ನೀರಿನ ಮಟ್ಟ:
ಕಳೆದ ರಾತ್ರಿ ಭಟ್ಕಳ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಭಾರಿ ಮಳೆಯಾಗಿದ್ದರಿಂದ ನದಿಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದರ ಬೆನ್ನಲ್ಲೇ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದರಿಂದ, ನದಿಗೆ ಉಬ್ಬರವಿಳಿತದ ನೀರು ನುಗ್ಗಿ ನೀರಿನ ಮಟ್ಟ ಏಕಾಏಕಿ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಪ್ರಕೃತಿಯ ಈ ದಿಢೀರ್ ಬದಲಾವಣೆಯಿಂದಾಗಿ ತಕ್ಷಣವೇ ದಾರಿ ಕಾಣದೆ ಇವರೆಲ್ಲರೂ ನದಿಯ ಸುಳಿಗೆ ಸಿಲುಕಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ನದಿಯಲ್ಲಿ ಮುಳುಗಿ ಮೃತಪಟ್ಟ ಎಂಟೂ ಜನರ ಮೃತದೇಹಗಳನ್ನು ಅಳ್ವೆಕೋಡಿ ಬಳಿ ಪತ್ತೆಹಚ್ಚಿ ಹೊರತೆಗೆಯಲಾಗಿದ್ದು, ಮೃತರನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:
ಲಕ್ಷ್ಮಿ ಮಹಾದೇವ ನಾಯ್ಕ (42), ಪಡುಶಿರಾಲಿ ಬೆಂಗ್ರೆ
ಉಮೇಶ ನಾಯ್ಕ (30), ಶಾರದಾಹೊಳೆ
ಲಕ್ಷ್ಮಿ ನಾಯ್ಕ (30), ಶಾರದಾಹೊಳೆ
ಲಕ್ಷ್ಮಿ ಅಣ್ಣಪ್ಪ ನಾಯ್ಕ (60)
ಲಕ್ಷ್ಮಿ ಶಿವರಾಮ ನಾಯ್ಕ (49)
ಜ್ಯೋತಿ ನಾಗಪ್ಪ ನಾಯ್ಕ (34)
ಮಾಲತಿ ನಾಯ್ಕ (38)
ಮಾಸ್ತಮ್ಮ ನಾಯ್ಕ
ಈ ಭೀಕರ ಜಲ ದುರಂತದಲ್ಲಿ ನಾಗರತ್ನಾ ಮತ್ತು ಮಹಾದೇವಿ ಎಂಬ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಇವರಿಬ್ಬರನ್ನು ಸ್ಥಳೀಯರು ತಕ್ಷಣವೇ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಮುಂದುವರಿದ ಶೋಧ ಕಾರ್ಯ – ತಾಲೂಕಿನಾದ್ಯಂತ ಕಂಬನಿ:
ಘಟನಾ ಸ್ಥಳಕ್ಕೆ ಭಟ್ಕಳ ಠಾಣೆಯ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ನದಿಯಲ್ಲಿ ಇನ್ನೂ ಕೆಲವು ವ್ಯಕ್ತಿಗಳು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ಮೀನುಗಾರರು ಮತ್ತು ರಕ್ಷಣಾ ಸಿಬ್ಬಂದಿ ಜಂಟಿಯಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ಎಂಟು ಮಂದಿ ದುರ್ಮರಣಕ್ಕೀಡಾದ ಈ ಘಟನೆಯಿಂದಾಗಿ ಭಟ್ಕಳ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಸಾರ್ವಜನಿಕರು ತೀವ್ರ ಕಂಬನಿ ಮಿಡಿದಿದ್ದಾರೆ.