ಡೈಲಿವಾರ್ತೆ: 08/ಜು./2026

ಸುರತ್ಕಲ್: ಮದರಸ ವಿದ್ಯಾರ್ಥಿಗೆ ದಂಡನೆ – ಮಸೀದಿಯೊಳಗೆ ನುಗ್ಗಿ ಧರ್ಮಗುರುವಿನ ಮೇಲೆ ಅಮಾನವೀಯ ಹಲ್ಲೆ, ಜೀವ ಬೆದರಿಕೆ, ಆರೋಪಿ ವಶಕ್ಕೆ!

​ಮಂಗಳೂರು: ಮದರಸದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಶಿಕ್ಷಿಸಿದರೆಂಬ ಕಾರಣಕ್ಕೆ, ಆಕ್ರೋಶಗೊಂಡ ಬಾಲಕನ ಕುಟುಂಬಸ್ಥರು ಮಸೀದಿಯೊಳಗೆ ನುಗ್ಗಿ ಧರ್ಮಗುರುಗಳ (ಉಸ್ತಾದ್) ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಗಂಭೀರ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಕೃಷ್ಣಾಪುರದ ತ್ವೈಬ ಮಸೀದಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ.

​ಘಟನೆಯ ಹಿನ್ನೆಲೆ:
​ಸ್ಥಳೀಯ ಮಸೀದಿಯ ಮದರಸದಲ್ಲಿ ಇಲ್ಮ್ ಕಲಿಯುತ್ತಿದ್ದ ಬಾಲಕನಿಗೆ ಶಿಸ್ತು ಮೂಡಿಸುವ ಸಲುವಾಗಿ ಉಸ್ತಾದ್ ಅವರು ಹೊಡೆದಿದ್ದರು ಎನ್ನಲಾಗಿದೆ. ಇದರಿಂದ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವಿಷಯ ತಿಳಿದ ಬಾಲಕನ ಚಿಕ್ಕಪ್ಪ, ತಾಯಿ ಮತ್ತು ಕುಟುಂಬದ ಇತರ ಸದಸ್ಯರು ತೀವ್ರ ಆಕ್ರೋಶದಿಂದ ಮಸೀದಿಗೆ ಧಾವಿಸಿದ್ದಾರೆ. ಈ ವೇಳೆ ಮಸೀದಿಯ ಕೊಠಡಿಯೊಂದರಲ್ಲಿ ಉಸ್ತಾದ್ ಅವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಒಳನುಗ್ಗಿದ ಕುಟುಂಬಸ್ಥರು ತೀವ್ರ ವಾಕ್ಸಮರ ನಡೆಸಿದ್ದಾರೆ.
​ವೈರಲ್ ಆಗಿರುವ ವಿಡಿಯೋದಲ್ಲಿ ದಾಖಲಾಗಿರುವಂತೆ, ಬಾಲಕನ ತಾಯಿ ಮತ್ತು ಚಿಕ್ಕಪ್ಪ ಉಸ್ತಾದ್ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಸ್ಥಳದಲ್ಲಿದ್ದ ಕಮಿಟಿ ಸದಸ್ಯರು “ಏನೇ ಇದ್ದರೂ ಕಮಿಟಿ ಮುಂದೆ ಬಂದು ಮಾತನಾಡಿ, ನಾವೇ ಒಂದು ತೀರ್ಮಾನ ಕೈಗೊಳ್ಳೋಣ, ದಯವಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳಬೇಡಿ” ಎಂದು ಕೈಮುಗಿದು ಮನವಿ ಮಾಡಿದರೂ ಕೇಳದ ಬಾಲಕನ ಚಿಕ್ಕಪ್ಪ, ಏಕಾಏಕಿ ಉಸ್ತಾದ್ ಅವರ ಮೇಲೆ ಮುಗಿಬಿದ್ದು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಬಹಿರಂಗವಾಗಿ ಕೊಲೆ ಬೆದರಿಕೆಯನ್ನು ಒಡ್ಡಿದ್ದಾನೆ.

ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಜಮಾತ್ ಕಮಿಟಿ ಆಕ್ರೋಶ:

ಘಟನೆಯ ಕುರಿತು ಜಮಾತ್ ಕಮಿಟಿ ಸದಸ್ಯರಾದ ಉಸ್ಮಾನ್ ಅವರು ಮಾಹಿತಿ ನೀಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
​ಹುಡುಗನಿಗೆ ಹೊಡೆದ ವಿಷಯ ತಿಳಿದ ತಕ್ಷಣ ನಾವು ಕಾನೂನು ಕೈಗೆತ್ತಿಕೊಳ್ಳದಂತೆ ಬಾಲಕನ ಕುಟುಂಬಕ್ಕೆ ತಿಳಿಸಿದ್ದೆವು. ಕಮಿಟಿಯ ಸಮ್ಮುಖದಲ್ಲೇ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಮಾಡೋಣ ಎಂದರೂ ಕೇಳದೆ ಬಾಲಕನ ಚಿಕ್ಕಪ್ಪ ಧರ್ಮಗುರುಗಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಪವಿತ್ರ ಮಸೀದಿಯೊಳಗೆ ಉಸ್ತಾದ್‌ಗಳಿಗೆ ಈ ರೀತಿ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ. ಉಸ್ತಾದ್‌ಗೆ ಕಮಿಟಿ ಮತ್ತು ಇಡೀ ಜಮಾತ್ ಸಂಪೂರ್ಣ ಬೆಂಬಲ ನೀಡಲಿದ್ದು, ಅವರ ಸುರಕ್ಷತೆಗೆ ನಾವು ಬದ್ಧವಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
​ಘಟನೆಯ ನಂತರ ಉಸ್ತಾದ್ ಅವರು ಸೌಜನ್ಯದಿಂದ ದೂರು ನೀಡಲು ನಿರಾಕರಿಸಿದ್ದರೂ, ಧಾರ್ಮಿಕ ಕೇಂದ್ರದ ಒಳಗೆ ನಡೆದ ಈ ಗೂಂಡಾವರ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಟಿಯು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು – ಆರೋಪಿ ವಶಕ್ಕೆ:

ಮಸೀದಿಯೊಳಗೆ ಧರ್ಮಗುರುವಿನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸುರತ್ಕಲ್ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿದೆ. ಸುರತ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಅವರ ನೇತೃತ್ವದ ವಿಶೇಷ ತಂಡವು ತನಿಖೆ ಕೈಗೊಂಡು, ಆರೋಪಿಯ ಮೊಬೈಲ್ ಲೋಕೇಶನ್ ಆಧರಿಸಿ ಆತನನ್ನು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಜಮಾತಿನ ಮುಖಂಡರು ಆಡಿಯೋ ಸಂದೇಶದ ಮೂಲಕ ಖಚಿತಪಡಿಸಿದ್ದಾರೆ.
​ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಮನವಿ:
​ಘಟನೆಯ ಕುರಿತು ಈಗಾಗಲೇ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಸಾರ್ವಜನಿಕರು ಹಾಗೂ ಜಮಾತ್‌ನ ಬಾಂಧವರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳನ್ನು ಹರಿಬಿಟ್ಟು ಅನಗತ್ಯ ವದಂತಿ ಅಥವಾ ಗೊಂದಲಗಳನ್ನು ಸೃಷ್ಟಿಸಬಾರದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಕಟ್ಟುನಿಟ್ಟಿನ ವಿನಂತಿ ಮಾಡಿದೆ.