




ಡೈಲಿವಾರ್ತೆ: 28/ಮೇ/2026


‘ಕಾವೇರಿ’ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ತಬ್ಬಿ ಕಾಲಿಗೆ ಬಿದ್ದ ಡಿಕೆಶಿ: ಕಾಂಗ್ರೆಸ್ ಒಳರಾಜಕೀಯಕ್ಕೆ ಹೊಸ ಸಂದೇಶ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಾಯಕತ್ವ ಬದಲಾವಣೆ ಹಾಗೂ ಒಳಸಂಘರ್ಷದ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾವೇರಿ ನಿವಾಸದಲ್ಲಿ ನಡೆದ ಉಪಹಾರ ಸಭೆಯಲ್ಲಿ ಪರಸ್ಪರ ಅಪ್ಪಿಕೊಂಡು ಒಗ್ಗಟ್ಟಿನ ಸಂದೇಶ ರವಾನಿಸಿದರು.
ಬೆಳಗ್ಗೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದೃಶ್ಯಗಳು ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿವೆ. ಹಲವು ದಿನಗಳಿಂದ ಕಾಂಗ್ರೆಸ್‌ನ ಒಳರಾಜಕೀಯ ಕುರಿತಾಗಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈ ಭೇಟಿ ರಾಜಕೀಯ ಮಹತ್ವ ಪಡೆದಿದೆ.
ಉಪಹಾರ ಸಭೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೆಲಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಬಳಿಕ ಹಿರಿಯ ಸಚಿವರ ಸಮ್ಮುಖದಲ್ಲಿ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಸಿದ್ದರಾಮಯ್ಯನವರ ಪಕ್ಕದಲ್ಲೇ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕುಳಿತಿರುವುದು ಪಕ್ಷದ ಏಕತೆಯ ಸಂದೇಶವಾಗಿ ಕಾಣಿಸಿಕೊಂಡಿತು.
ಸಭೆಯಲ್ಲಿ ರಾಜ್ಯ ಸರ್ಕಾರದ ಹಲವು ಹಿರಿಯ ಸಚಿವರು ಮತ್ತು ಪ್ರಮುಖ ನಾಯಕರು ಭಾಗವಹಿಸಿದ್ದರು. ಡಿಕೆ ಶಿವಕುಮಾರ್, ಪರಮೇಶ್ವರ್, ಭೈರತಿ ಸುರೇಶ್, ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಮಧು ಬಂಗಾರಪ್ಪ, ಸತೀಶ್ ಜಾರಕಿಹೋಳಿ, ಮಹದೇವಪ್ಪ, ಮಂಕಾಳ್ ವೈದ್ಯ, ತಿಮ್ಮಾಪುರ, ಶರಣು ಪ್ರಕಾಶ್ ಪಾಟೀಲ್, ಮುನಿಯಪ್ಪ, ಹೆಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಬೋಸರಾಜು ಉಪಸ್ಥಿತರಿದ್ದರು.ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಹಾಗೂ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ನಡೆದ ಈ ಉಪಹಾರ ಸಭೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಸಂದೇಶ ನೀಡುವ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂಬುದನ್ನು ಸಾರಲು ಮುಂದಾಗಿದ್ದಾರೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.