ಡೈಲಿವಾರ್ತೆ: 31/ಮೇ/2026

​ಕೋಟ: ದಸಂಸ ಆಶ್ರಯದಲ್ಲಿ 27ನೇ ವರ್ಷದ ‘ಅಕ್ಷರ ದಕ್ಕರೆ’ ಉಚಿತ ನೋಟ್‌ಬುಕ್ ಹಾಗೂ ವಿದ್ಯಾರ್ಥಿವೇತನ ವಿತರಣೆ:ಖಾಲಿ ಪುಟಗಳಲ್ಲಿ ನಿಮ್ಮ ಸಾಧನೆಯ ಇತಿಹಾಸ ಬರೆಯಿರಿ: ಸಾಧಕ ವಿದ್ಯಾರ್ಥಿ ಪ್ರೀತಂ ಪೂಜಾರಿ ಕರೆ

​ಕೋಟ: ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ನೋಟ್‌ಬುಕ್‌ಗಳು ಕೇವಲ ಪುಸ್ತಕಗಳಲ್ಲ, ಅವು ಅವರ ಭವಿಷ್ಯದ ಕನಸುಗಳಿಗೆ ಅಡಿಪಾಯ ಹಾಕುವ ಅಮೂಲ್ಯ ಸಾಧನಗಳಾಗಿವೆ. ಈ ಖಾಲಿ ಪುಟಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಾಧನೆಯ ಇತಿಹಾಸವನ್ನು ಬರೆಯುವಂತಾಗಬೇಕು,” ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿ ಪ್ರೀತಂ ಪೂಜಾರಿ ಕರೆ ನೀಡಿದರು.

​ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೋಟ ಹೋಬಳಿ ಘಟಕದ ಆಶ್ರಯದಲ್ಲಿ ಕೋಟದ ಬಿ. ಸಿ. ಹೊಳ್ಳ ಸಭಾಭವನ (ಸಿ.ಎ. ಬ್ಯಾಂಕ್) ದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ 27ನೇ ವರ್ಷದ ‘ಅಕ್ಷರ ದಕ್ಕರೆ-2026’ ಉಚಿತ ನೋಟ್‌ಬುಕ್ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
​ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ತನ್ನನ್ನು ಕಾರ್ಯಕ್ರಮದ ಉದ್ಘಾಟಕರನ್ನಾಗಿ ಆಹ್ವಾನಿಸಿರುವುದು ವೈಯಕ್ತಿಕ ಗೌರವಕ್ಕಿಂತಲೂ ಶಿಕ್ಷಣ ಮತ್ತು ಜ್ಞಾನಕ್ಕೆ ದೊರೆತ ಗೌರವವಾಗಿದೆ ಎಂದ ಪ್ರೀತಂ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಸಂದೇಶವನ್ನು ಜೀವನ ಮೌಲ್ಯವಾಗಿ ಅಳವಡಿಸಿಕೊಂಡು, ಕಳೆದ 26 ವರ್ಷಗಳಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ವಿದ್ಯಾರ್ಥಿವೇತನ ವಿತರಿಸುತ್ತಿರುವ ಸಂಘಟನೆಯ ಸೇವೆಯನ್ನು ಶ್ಲಾಘಿಸಿದರು.

​ಸಂವಿಧಾನದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಮಹಾಲಕ್ಷ್ಮಿ ಸಿ.ಜಿ.


​ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದ, ದೆಹಲಿಯ ಸಂಸತ್ ಭವನದಲ್ಲಿ ಅಂಬೇಡ್ಕರ್ ಜಯಂತಿಯಂದು ಭಾಷಣ ಮಾಡಿ ಗಮನ ಸೆಳೆದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ವಿದ್ಯಾರ್ಥಿನಿ ಕು. ಮಹಾಲಕ್ಷ್ಮಿ ಸಿ. ಜಿ. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ತಮ್ಮ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತವೆ ಎಂದರು.

ಶಿಕ್ಷಣದಿಂದ ಮಾತ್ರ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ: ಆನಂದ ಸಿ. ಕುಂದರ್

​ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲ ಆಧಾರವಾಗಿದ್ದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಜಾತಿ-ಮತ ಭೇದ ಮರೆತು ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರಕುವಂತೆ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು.

​ಸಾಧನೆ ಶಿಖರಕ್ಕೇರಿದ ನಂತರ ಸಮಾಜಕ್ಕೆ ಮರಳಿ ಕೊಡುವುದನ್ನು ಕಲಿಯಿರಿ: ದಿನೇಶ್ ಹೆಗ್ಡೆ

​ಪ್ರಮುಖ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ ಯಾವುದೋ ರಾಜಕಾರಣಿಗಳು ಅಥವಾ ಗಣ್ಯರಿಂದ ಕಾರ್ಯಕ್ರಮ ಉದ್ಘಾಟಿಸುವ ಬದಲು, ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿ ಪ್ರೀತಂ ಪೂಜಾರಿ ಹಾಗೂ ಸಂಸತ್ ಭವನದಲ್ಲಿ ಮಿಂಚಿದ ಮಹಾಲಕ್ಷ್ಮಿ ಅವರಂತಹ ಯುವ ಪ್ರತಿಭೆಗಳ ಕೈಯಿಂದ ಈ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಮಾದರಿಯಾದದ್ದು ಎಂದರು. ಬಿಕ್ಕಲಕಟ್ಟೆಯ ಒಂದು ಸಣ್ಣ ಬಾಡಿಗೆ ಮನೆಯಲ್ಲಿದ್ದುಕೊಂಡು ಸಾಧನೆ ಮಾಡಿದ ಪ್ರೀತಂ ಇಂದಿನ ಯುವಕರಿಗೆ ಆದರ್ಶಪ್ರಾಯ ಎಂದು ಮೆಚ್ಚುಗೆ ಸೂಚಿಸಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಿದ ನಂತರ ತಮಗೆ ನೆರವು ನೀಡಿದ ಸಮಾಜವನ್ನು ಮರೆಯಬಾರದು ಮತ್ತು ಮರಳಿ ಸಹಕಾರ ನೀಡುವುದನ್ನು ಕಲಿಯಬೇಕು ಎಂದು ಕರೆ ನೀಡಿದರು.

​ಬಾಬಾಸಾಹೇಬರ ಜ್ಞಾನದ ಹಠ ದಾರಿದೀಪವಾಗಲಿ: ಸುಂದರ್ ಮಾಸ್ಟರ್

​ದಸಂಸ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಪ್ರಖ್ಯಾತ ಚಿಂತಕ ಸುಂದರ್ ಮಾಸ್ಟರ್ ಮಾತನಾಡಿnಸುಮಾರು 135 ವರ್ಷಗಳ ಹಿಂದೆ ಶಾಲೆಗಳ ಒಳಗೆ ಇತರ ಮಕ್ಕಳೊಂದಿಗೆ ಕೂರಲು ಕೂಡ ಅವಕಾಶವಿಲ್ಲದ ಕಠಿಣ ಸಾಮಾಜಿಕ ವ್ಯವಸ್ಥೆ ಇತ್ತು. ಅಂತಹ ಸನ್ನಿವೇಶದಲ್ಲೂ ಛಲ ಬಿಡದೆ ಹೋರಾಡಿ ಜಗತ್ತೇ ಮೆಚ್ಚುವಂತಹ ಶ್ರೇಷ್ಠ ಸಂವಿಧಾನವನ್ನು ಬರೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜ್ಞಾನದ ಹಠ ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು. ಜ್ಞಾನದ ಹುಡುಕಾಟ ನಿರಂತರವಾಗಿದ್ದಾಗ ಮಾತ್ರ ಮತ್ತಷ್ಟು ಉನ್ನತ ಸ್ಥಾನಗಳನ್ನು ತಲುಪಲು ಸಾಧ್ಯ ಎಂದು ಕಿವಿಮಾತು ಹೇಳಿದರು.

​ಪ್ರಶಸ್ತಿ ಹಾಗೂ ಪುರಸ್ಕಾರ ವಿತರಣೆ:
​ಅಕ್ಷರದಕ್ಕರೆ ಪುರಸ್ಕಾರ: ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲೇ ಪ್ರಥಮ ರ್ಯಾಂಕ್ ಗಳಿಸಿದ ಕುಂದಾಪುರದ ಪ್ರೀತಮ್ ಪೂಜಾರಿ ಹಾಗೂ ಸಂಸತ್ ಭವನದಲ್ಲಿ ಅಂಬೇಡ್ಕರ್ ಕುರಿತು ಭಾಷಣಗೈದ ಮಹಾಲಕ್ಷ್ಮಿ ಸಿ.ಜಿ ಅವರಿಗೆ ನೀಡಿ ಗೌರವಿಸಲಾಯಿತು.
​ಸಮುದಾಯ ಸಾಧಕ ಪುರಸ್ಕಾರ: ಉಪನ್ಯಾಸಕ ಮಂಜುನಾಥ್ ಹಾಗೂ ಬಿಎಸ್‌ಎನ್‌ಎಲ್ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣೂರಿನ ಪ್ರಭಾಕರ್ ಇವರುಗಳಿಗೆ ನೀಡಿ ಸನ್ಮಾನಿಸಲಾಯಿತು.
​ವೇದಿಕೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್‌ಬುಕ್ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪನಮನ ಸಲ್ಲಿಸಲಾಯಿತು.
​ಗಣ್ಯರ ಉಪಸ್ಥಿತಿ:
​ದಸಂಸ ಕೋಟ ಹೋಬಳಿಯ ಸಂಚಾಲಕ ನಾಗರಾಜ್ ಪಡುಕರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ, ಜಿಲ್ಲಾ ಸಮಿತಿಯ ಸದಸ್ಯ ಶ್ರೀನಿವಾಸ ವಡ್ಡರ್ಸೆ, ತಾಲೂಕು ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಹಿರಿಯ ಮುಖಂಡ ಐತ ಕಾರ್ಕಡ, ದಸಂಸ ಮಹಿಳಾ ಒಕ್ಕೂಟದ ಗೀತಾ ಸುರೇಶ್, ಮಂಗಳೂರು ಗಣಪತಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರತ್ನಾಕರ ಗುಂಡ್ಮಿ, ಉಪನ್ಯಾಸಕ ಸಂಜೀವ ಸಿ. ಗುಂಡ್ಮಿ ಹಾಗೂ ಕೋಟ ವಿವೇಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರೇಮಾನಂದ ಬಾರ್ಕೂರು ಉಪಸ್ಥಿತರಿದ್ದರು.
​ದಸಂಸ ತಾಲೂಕು ಪ್ರಧಾನ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಪ್ರಭಾಕರ್ ಮಣೂರು ನಿರೂಪಿಸಿ, ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು. ರವಿ ಬನ್ನಾಡಿ ಸಹಕರಿಸಿದರು ಹಾಗೂ ಅವರ ನೇತೃತ್ವದ ಅಘೋರೇಶ್ವರ ಸಂಗೀತ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.