ಡೈಲಿವಾರ್ತೆ: 01/ಜೂ./2026

ಶಿರೂರು ಹೊಳೆಯಲ್ಲಿ ಮುಳುಗಿ ಪ್ರವಾಸಿ ವಿದ್ಯಾರ್ಥಿ ದುರ್ಮರಣ!

​ಶಿರೂರು: ಪ್ರವಾಸಕ್ಕೆ ಬಂದಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೋರ್ವ ಪ್ರಸಿದ್ಧ ಪ್ರವಾಸಿ ತಾಣವಾದ ಸಂಕದಗುಂಡಿ ಹೊಳೆಯಲ್ಲಿ ಈಜಲು ತೆರಳಿ ನೀರಿನ ಆಳ ತಿಳಿಯದೇ ಮುಳುಗಿ ಮೃತಪಟ್ಟ ಆಘಾತಕಾರಿ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

​ಹಾವೇರಿ ಸಮೀಪದ ಕೃಷಿ ನಗರದ ನಿವಾಸಿ, ಪ್ರಸ್ತುತ 16 ವರ್ಷದ ಆಯುಷ್ ಮೃತಪಟ್ಟ ದುರ್ದೈವಿ ಬಾಲಕ.
ಈತ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ.

​ಘಟನೆಯ ಹಿನ್ನೆಲೆ:
​ಹಾವೇರಿಯ ಕೃಷಿ ನಗರದ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಜನರ ತಂಡ ಮುರುಡೇಶ್ವರ ಮತ್ತು ಕನ್ಯಾಕುಮಾರಿ ಪ್ರವಾಸಕ್ಕೆ ಹೊರಟಿತ್ತು. ಮೊದಲ ಹಂತವಾಗಿ ಮುರುಡೇಶ್ವರದ ಪ್ರವಾಸ ಮುಗಿಸಿದ ತಂಡವು, ಸೋಮವಾರ ಬೆಳಿಗ್ಗೆ ಶಿರೂರಿನ ಸಂಕದಗುಂಡಿ ಹೊಳೆಯ ಬಳಿ ವಿಶ್ರಾಂತಿಗಾಗಿ ವಾಹನ ನಿಲ್ಲಿಸಿತ್ತು. ಕುಟುಂಬದ ಹಿರಿಯರೆಲ್ಲರೂ ಮಧ್ಯಾಹ್ನದ ಊಟದ ತಯಾರಿಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ, ಆಯುಷ್ ಹಾಗೂ ಆತನ ಸಹೋದರ ಪಕ್ಕದಲ್ಲೇ ಇದ್ದ ನದಿಗೆ ಸ್ನಾನ ಮಾಡಲು ಇಳಿದಿದ್ದಾರೆ.

​ನದಿಯ ಅಪಾಯಕಾರಿ ಆಳವಿದ್ದ ಜಾಗಕ್ಕೆ ಈಜಲು ತೆರಳಿದ ಆಯುಷ್, ನೀರಿನ ಸೆಳೆತ ಹಾಗೂ ಆಳದ ಅರಿವಿಲ್ಲದೆ ದಿಢೀರನೆ ಮುಳುಗಲಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಆತನ ಸಹೋದರ ತಕ್ಷಣವೇ ಓಡಿಹೋಗಿ ದಡದಲ್ಲಿದ್ದ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾನೆ. ಸ್ಥಳೀಯರು ಹಾಗೂ ಕುಟುಂಬದವರು ತಕ್ಷಣವೇ ಬಾಲಕನನ್ನು ರಕ್ಷಿಸಲು ಧಾವಿಸಿ, ಬದುಕಿಸುವ ಸಕಲ ಪ್ರಯತ್ನಗಳನ್ನು ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

​ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಜಂಟಿಯಾಗಿ ಸುಮಾರು ಒಂದು ಗಂಟೆಯ ಕಾಲ ತೀವ್ರ ಶೋಧ ಕಾರ್ಯ ನಡೆಸಿದರು. ತದನಂತರ ಬಾಲಕನ ಶವವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ಮೃತ ಆಯುಷ್‌ನ ತಂದೆ-ತಾಯಿ ಉದ್ಯೋಗದ ನಿಮಿತ್ತ ಗುಜರಾತ್‌ನಲ್ಲಿ ಸಣ್ಣ ಪ್ರಮಾಣದ ವ್ಯವಹಾರ ನಡೆಸುತ್ತಿದ್ದು, ಮಗನ ಅಗಲಿಕೆಯಿಂದ ಇಡೀ ಕುಟುಂಬ ಸದ್ಯ ತೀವ್ರ ಶೋಕಾಚರಣೆಯಲ್ಲಿದೆ.

​ಸದ್ಯ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರವಾಸದ ಸವಿನೆನಪಿಗಾಗಿ ಬಂದ ಜಾಗದಲ್ಲಿ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿತ್ತು