ಡೈಲಿವಾರ್ತೆ: 01/ಜೂ./2026

​ಬ್ರಹ್ಮಾವರ: ದಾರಿ ಬಿಡುವ ವಿಚಾರದಲ್ಲಿ ವಾಗ್ವಾದ – ‘ಥಾರ್‌’ ಕಾರು ಚಾಲಕನಿಗೆ ನಾಲ್ವರಿಂದ ಹಲ್ಲೆ, ಪ್ರಕರಣ ದಾಖಲು ​

ಬ್ರಹ್ಮಾವರ: ದಾರಿ ಬಿಡುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಕಾರು ಚಾಲಕನೋರ್ವನಿಗೆ ನಾಲ್ವರು ವ್ಯಕ್ತಿಗಳು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ರಸ್ತೆಯಲ್ಲೇ ಕೆಳಗೆ ಕೆಡವಿ ಕಾಲಿನಿಂದ ತುಳಿದು ಭೀಕರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಪೇತ್ರಿ ಜಂಕ್ಷನ್ ಬಳಿ ಸಂಭವಿಸಿದೆ.

ಘಟನೆಗೆ ಸಂಬಂಧಿಸಿದಂತೆ ​ಕಾರ್ಕಳ ತಾಲೂಕಿನ ನಂದಳಿಕೆ ನಿವಾಸಿ ಸುಧೀರ್‌ ಶೆಟ್ಟಿ (46) ಅವರು ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

​ಘಟನೆಯ ಹಿನ್ನೆಲೆ:​ ದಿನಾಂಕ 30/05/2026 ರಂದು ಸಂಜೆ 4:15ರ ಸುಮಾರಿಗೆ ದೂರುದಾರರಾದ ಸುಧೀರ್ ಶೆಟ್ಟಿ ಅವರು ತಮ್ಮ ವ್ಯವಹಾರದ ನಿಮಿತ್ತ ಪೇತ್ರಿ ಜಂಕ್ಷನ್‌ ಬಳಿ ಇರುವ ಎಸ್‌ಪಿ ಚಿಕನ್ ಸೆಂಟರ್ ಎದುರು ಇದ್ದರು. ಈ ವೇಳೆ ಬ್ರಹ್ಮಾವರ ಕಡೆಯಿಂದ ಪೇತ್ರಿ ಜಂಕ್ಷನ್ ತಲುಪಿ ಹಿರಿಯಡ್ಕ ಕಡೆಗೆ ಚಲಿಸುತ್ತಿದ್ದ ಕೆಂಪು ಬಣ್ಣದ ಮಹೀಂದ್ರಾ ಥಾರ್‌ (KA-53-MN-1299) ವಾಹನದ ಚಾಲಕ, ಜಂಕ್ಷನ್‌ನಲ್ಲಿರುವ ಲಿವಿಂಗ್ ಫ್ಲವರ್ ಸ್ಟಾಲ್ ಎದುರಿನ ಹಿರಿಯಡ್ಕ ರಸ್ತೆಯ ಬ್ಯಾರಿಕೇಡ್ ಬಳಿ ಬಂದಿದ್ದಾನೆ.​ಅದೇ ಸಮಯದಲ್ಲಿ ಎದುರಿನಿಂದ ಬಿಳಿ ಬಣ್ಣದ ಮಹೀಂದ್ರಾ ಕಾರು (26-BH-4103-F) ಬಂದಿದ್ದು, ರಸ್ತೆ ಕಿರಿದಾಗಿದ್ದರಿಂದ ಥಾರ್ ವಾಹನದ ಚಾಲಕ ತನ್ನ ವಾಹನವನ್ನು ಬ್ಯಾರಿಕೇಡ್ ಎದುರು ನಿಲ್ಲಿಸಿದ್ದಾನೆ. ಬಳಿಕ ತನ್ನ ಬಲಬದಿಯಲ್ಲಿದ್ದ ಜಾಗದ ಮೂಲಕ ಮುಂದೆ ಬರುವಂತೆ ಎದುರಿನ ಕಾರಿನ ಚಾಲಕನಿಗೆ ಸನ್ನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಥಾರ್ ಚಾಲಕ ಕಾರಿನಿಂದ ಕೆಳಗಿಳಿದು ಬಂದು ಎದುರಿನ ಕಾರಿನವರಿಗೆ ಮುಂದೆ ಹೋಗಲು ದಾರಿ ತೋರಿಸಿ, ವಾಪಸ್ ತನ್ನ ಕಾರಿನಲ್ಲಿ ಬಂದು ಕುಳಿತಿದ್ದಾನೆ.​ ದಾರಿ ತೋರಿಸಿದರೂ ಆಕ್ರೋಶಗೊಂಡ ಎದುರಿನ ಕಾರಿನಲ್ಲಿದ್ದ ಜಗದೀಶ ಅಲಿಯಾಸ್ ಸುನಿಲ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಗೌತಮ್ ಹಾಗೂ ಮತ್ತೊಬ್ಬ ವ್ಯಕ್ತಿ ಕಾರಿನಿಂದ ಇಳಿದು ಬಂದಿದ್ದಾರೆ. ಇದನ್ನು ಕಂಡು ಥಾರ್ ಚಾಲಕ ಕೂಡ ಮತ್ತೊಮ್ಮೆ ಕಾರಿನಿಂದ ಕೆಳಗಿಳಿದಿದ್ದಾನೆ. ಈ ವೇಳೆ ನಾಲ್ವರ ತಂಡ ಥಾರ್ ಚಾಲಕನೊಂದಿಗೆ ತೀವ್ರ ವಾಗ್ವಾದಕ್ಕಿಳಿದು, ಅವಾಚ್ಯವಾಗಿ ಬೈದು ಏಕಾಏಕಿ ಆತನ ಕೆನ್ನೆಗೆ ಹೊಡೆದಿದ್ದಾರೆ. ನಾಲ್ವರೂ ಒಟ್ಟಾಗಿ ಸೇರಿ ಹಲ್ಲೆ ನಡೆಸಲಾರಂಭಿಸಿದಾಗ ಗಾಬರಿಗೊಂಡ ಥಾರ್ ಚಾಲಕ ಪ್ರಾಣಭಯದಿಂದ ತಕ್ಷಣ ತನ್ನ ಕಾರು ಹತ್ತಲು ಹೋಗಿದ್ದಾನೆ.​ಆದರೆ, ಬಿಡದ ಹಲ್ಲೆಕೋರರು ಆತನನ್ನು ಕಾರು ಹತ್ತದಂತೆ ಬಲವಂತವಾಗಿ ಎಳೆದು ತಡೆದು ನಿಲ್ಲಿಸಿದ್ದಾರೆ. ರಸ್ತೆಯಲ್ಲೇ ಆತನನ್ನು ಕೆಳಗೆ ಕೆಡವಿ, ಕಾಲಿನಿಂದ ಕ್ರೂರವಾಗಿ ತುಳಿದು, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕ ರಸ್ತೆಯಲ್ಲೇ ನಡೆದ ಈ ದಾಂಧಲೆಯ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ: 126(2) (ಅಕ್ರಮ ತಡೆ), 115(2) (ಸ್ವಯಂಪ್ರೇರಿತ ಗಾಯ), 352 (ಶಾಂತಿ ಭಂಗ ತರುವ ಉದ್ದೇಶದ ನಿಂದನೆ), 351(2) (ಕ್ರಿಮಿನಲ್ ಬೆದರಿಕೆ) ಹಾಗೂ 3(5) (ಜಂಟಿ ಅಪರಾಧ) ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.​