ಡೈಲಿವಾರ್ತೆ: 01/ಜೂ./2026

ಹೊಸನಗರದಲ್ಲಿ ಘೋರ ದುರಂತ: ಕೋವಿಯಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ – ತಲೆ ಛಿದ್ರ-ಛಿದ್ರ!

​ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ ವೃದ್ಧರೊಬ್ಬರು ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ನಡೆದಿದೆ.

​ಗ್ರಾಮದ ನಿವಾಸಿ ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಗುಂಡಿನ ತೀವ್ರತೆ ಎಷ್ಟಿತ್ತೆಂದರೆ ವೃದ್ಧನ ತಲೆ ಸಂಪೂರ್ಣವಾಗಿ ಛಿದ್ರಛಿದ್ರಗೊಂಡಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

​ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ರಾಮಚಂದ್ರ ರಾವ್ ಅವರು ಮೂರು ದಿನಗಳ ಹಿಂದಷ್ಟೇ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ಈ ವೇಳೆ ಅವರ ತಲೆಗೆ ಬಲವಾದ ಪೆಟ್ಟಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಸಹ, ಅವರಿಗೆ ನೋವು ಕಡಿಮೆಯಾಗಿರಲಿಲ್ಲ. ತಲೆಯಲ್ಲಿ ಉಂಟಾಗುತ್ತಿದ್ದ ಅತೀವ ಮತ್ತು ಅಸಹನೀಯ ನೋವನ್ನು ತಡೆಯಲು ಸಾಧ್ಯವಾಗದೆಯೇ ಅವರು ಈ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

​ಘಟನಾ ಸ್ಥಳಕ್ಕೆ ಧಾವಿಸಿರುವ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯ ವೇಳೆ ಕೆಲವು ಗಂಭೀರ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಆ ನಿಟ್ಟಿನಲ್ಲಿ ಗಮನ ಹರಿಸಿದ್ದಾರೆ.

​85 ವರ್ಷದ ವೃದ್ಧರೊಬ್ಬರು ಅಷ್ಟು ಉದ್ದದ ಸಿಂಗಲ್ ಬ್ಯಾರಲ್ ಗನ್ನಿನ ಟ್ರಿಗರ್ ಅನ್ನು ತಾವೇ ಹೇಗೆ ಒತ್ತಲು ಸಾಧ್ಯವಾಯಿತು ಎಂಬುದು ತನಿಖಾಧಿಕಾರಿಗಳಿಗೆ ಯಕ್ಷಪ್ರಶ್ನೆಯಾಗಿದೆ.

ಆತ್ಮಹತ್ಯೆಗೆ ಬಳಸಲಾದ ಆ ಗನ್ ಕಾನೂನುಬದ್ಧವಾಗಿ ಪರವಾನಗಿ (ಲೈಸೆನ್ಸ್) ಹೊಂದಿದ್ದೇ ಅಥವಾ ಅಕ್ರಮ ಶಸ್ತ್ರಾಸ್ತ್ರವೇ ಎಂಬ ಬಗ್ಗೆಯೂ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.