ಡೈಲಿವಾರ್ತೆ: 05/ಜೂ./2026

ಶಿರ್ವ: ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷ ಪತ್ತೆ ಪ್ರಕರಣ: ಆರೋಪಿ ಸೆರೆ

ಉಡುಪಿ: ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಗಿನ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳನ್ನು ಎಸೆದ ಪ್ರಕರಣವನ್ನು ಭೇದಿಸಿದ ಶಿರ್ವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜೂನ್ 1ರಂದು ಹೊಳೆಯಲ್ಲಿ ಜಾನುವಾರದ ಅವಶೇಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ ಅವರು ಕಾಪು ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದರು.

ಈ ವೇಳೆ ಜಾನುವಾರದ ಮೇಲ್ದವಡೆಯ ಭಾಗ, ಎರಡು ಗೆರಸುಗಳು, ಮಾಂಸ ಹಾಗೂ ಹೊಟ್ಟೆಯ ಒಳಭಾಗಗಳನ್ನು ವಶಪಡಿಸಿಕೊಂಡು, ಕರ್ನಾಟಕ ಜಾನುವಾರು ವಧೆ ತಡೆ ಹಾಗೂ ಸಂರಕ್ಷಣಾ ಕಾಯ್ದೆ-2020ರ ಕಲಂ 4 ಮತ್ತು 12ರಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಿರ್ವ ಪದವು ನಿವಾಸಿ ಅಶೋಕ (52) ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾರಾಟ ನಡೆಸಿ, ಉಳಿದ ಅವಶೇಷಗಳನ್ನು ಹೊಳೆಗೆ ಎಸೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನ ವಶದಲ್ಲಿದ್ದ ಜಾನುವಾರದ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತದ ವೃತ್ತ ನಿರೀಕ್ಷಕ ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್., ಸಿಬ್ಬಂದಿಗಳಾದ ಮಂಜುನಾಥ ಅಡಿಗ, ಕಿರಣ್, ಯಲ್ಲಾಲಿಂಗ, ಕಾಪು ಠಾಣೆಯ ರಘು ಹಾಗೂ ಪಡುಬಿದ್ರಿ ಠಾಣೆಯ ರಹಿಮಾನ್ ಮತ್ತು ಸಂದೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.