ಡೈಲಿವಾರ್ತೆ: 05/ಜೂ./2026

ಬಂಟ್ವಾಳ: ಎಂ.ಡಿ.ಎಂ.ಎ ಸಾಗಾಟ ಪತ್ತೆ ಪ್ರಕರಣ. ಮೂವರ ಬಂಧನ. 7.64ಲಕ್ಷ ಮೌಲ್ಯದ ಸೊತ್ತು ವಶಕ್ಕೆ

ಬಂಟ್ವಾಳ : ಕಾರೋಂದರಲ್ಲಿ ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಮೂವರನ್ನು ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿ ಗುರುವಾರ ಸಂಜೆ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ರೂ 7,64,000-/ ಮೌಲ್ಯದ ಎಂ.ಡಿ.ಎಂ.ಎ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು,
ಬಂಧಿತರನ್ನು ಬಂಟ್ವಾಳ ಪುದು ನಿವಾಸಿ ಎ,ಜುಬೈರ್ (39), ಬಂಟ್ವಾಳ ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಂಟ್ವಾಳ ಬಿ. ಮೂಡ ನಿವಾಸಿ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಎಂದು ಹೆಸರಿಸಲಾಗಿದೆ.

ಗುರುವಾರ ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಸಂದೀಪ್‌ ಕುಮಾರ್‌ ಶೆಟ್ಟಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಪ್ಲೈಒವರ್ ಬಳಿ ಕಾರೊಂದನ್ನು ತಪಾಸಣೆಗಾಗಿ ನಿಲ್ಲಿಸಿದ್ದು, ಕಾರನ್ನು ಪರಿಶೀಲಿಸಿದಾಗ ಮನೋದ್ರೇಕಕಾರಿ ವಸ್ತು ಸೇವನೆ ಮಾಡಲು ಬಳಸುವ ಸಾಧನ ಕಂಡು ಬಂದಿದೆ.

ಅವರನ್ನು ವಿಚಾರಿಸಿದಾಗ ಎಂ.ಡಿ.ಎಂ.ಎ ಎಂಬ ಮಾದಕ ದ್ರವ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿಸಿದ್ದು, ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ ಹಾಗೂ ಕಾರಿನಲ್ಲಿ ಅಂದಾಜು ರೂ 7,64,000-/ ಮೌಲ್ಯದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂ.ಡಿ.ಎಂ.ಎ ಮಾದಕದ್ರವ್ಯ ಹಾಗೂ ಮಾದಕ ವಸ್ತು ಸೇವನೆ ಮಾಡಲು ಉಪಯೋಗಿಸುವ ಸಾಧನ ಪತ್ತೆಯಾಗಿರುತ್ತದೆ. ಸದ್ರಿ ಸೊತ್ತುಗಳನ್ನು, ಆರೋಪಿಗಳ ಬಳಿಯಿದ್ದ 03 ಮೊಬೈಲ್ ಪೋನ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಂಡಿದ್ದಾರೆ.