



ಡೈಲಿವಾರ್ತೆ: 09/ಜೂ./2026


ಮಣಿಪಾಲ ಪೊಲೀಸರ ಭರ್ಜರಿ ಕಾರ್ಯಾಚರಣೆ:
ಅಂತರ್‌ರಾಜ್ಯ ಮನೆಕಳ್ಳರ ‘TATTO 313’ ಗ್ಯಾಂಗ್‌ನ ಇಬ್ಬರು ಖದೀಮರ ಬಂಧನ

ಉಡುಪಿ, ಜೂನ್ 9: ಅಂತರ್‌ರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಕುಖ್ಯಾತ ‘TATTO 313’ ಮನೆಕಳ್ಳರ ಗ್ಯಾಂಗ್ ಅನ್ನು ಮಣಿಪಾಲ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ₹7.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಿಬೆಟ್ಟು ಮಂಚಿಕೋಡಿಯಲ್ಲಿರುವ ಅಮಿತ್ ಡ್ಯಾನಿಯಲ್ ಅವರ ಮನೆಯಲ್ಲಿ ಫೆಬ್ರವರಿ 3 ಮತ್ತು 4ರ ಮಧ್ಯರಾತ್ರಿ ನಡೆದ ಕಳ್ಳತನ ಪ್ರಕರಣದ ತನಿಖೆ ವೇಳೆ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಕಳ್ಳರು ಮನೆಯ ಬಾಗಿಲು ಮುರಿದು ಸುಮಾರು 75 ಗ್ರಾಂ ತೂಕದ ₹7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೂನ್ 6ರಂದು ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಇಂದ್ರಾಳಿ ರೈಲ್ವೆ ಗೋಡೌನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಂಧಿತರು ಬೆಂಗಳೂರು ಮೂಲದ ದರ್ಶನ್ ಆರ್. (21) ಹಾಗೂ ದಾವಣಗೆರೆ ಜಿಲ್ಲೆಯ ಚಂದ್ರು (26) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ರೈಲ್ವೆ ಹಳಿ ಸಮೀಪದ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ನಡೆಸಿದ ತನಿಖೆಯಲ್ಲಿ, ಮಣಿಪಾಲದ ಕಳ್ಳತನ ಪ್ರಕರಣದಲ್ಲಿ ಇವರ ಭಾಗಿಯಾಗಿರುವುದು ದೃಢಪಟ್ಟಿದೆ.
ಆರೋಪಿಗಳು ಶಿವಮೊಗ್ಗದ ಲಾಡ್ಜ್‌ನಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ 39.70 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 13.30 ಗ್ರಾಂ ತೂಕದ ಚಿನ್ನದ ನೆಕ್ಲಸ್, 3.15 ಗ್ರಾಂ ತೂಕದ ಚಿನ್ನದ ಕಿವಿಯೋಲೆ, 3.87 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಎರಡು ಮೊಬೈಲ್ ಫೋನ್‌ಗಳು ಸೇರಿವೆ. ಒಟ್ಟು 60 ಗ್ರಾಂ ತೂಕದ ₹7.90 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ತನಿಖೆಯಲ್ಲಿ ‘TATTO 313’ ಗ್ಯಾಂಗ್‌ನ ಕಾರ್ಯವೈಖರಿ ಬೆಳಕಿಗೆ ಬಂದಿದೆ. ಗ್ಯಾಂಗ್ ಸದಸ್ಯರು ತಮ್ಮ ಕೈಗಳಲ್ಲಿ ‘TATTO 313’ ಎಂಬ ಹಚ್ಚೆ ಹಾಕಿಸಿಕೊಂಡು ಗುರುತಿಸಿಕೊಳ್ಳುತ್ತಿದ್ದರು. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಹಾಗೂ ಕಾಲುಗಳಿಗೆ ಸಾಕ್ಸ್ ಧರಿಸಿ ಕಬ್ಬಿಣದ ಉಪಕರಣಗಳ ನೆರವಿನಿಂದ ಮನೆಗಳ ಬಾಗಿಲು ಒಡೆದು ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿಯೂ ಇವರ ಕೈವಾಡವಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳ ಬಂಧನ ಬಾಕಿಯಿದ್ದು, ಮಣಿಪಾಲ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.