ಡೈಲಿವಾರ್ತೆ: 09/ಜೂ./2026

ಸಾಲಿಗ್ರಾಮದಲ್ಲಿ ‘ಉಡುಪಿ ಸಿವಿಕ್ ಆ್ಯಪ್’ ಜಾರಿ ಕುರಿತು ಡಿಸಿ ಸಭೆ: ಸಾರ್ವಜನಿಕರ ದೂರುಗಳ ಸುರಿಮಳೆ!
ತಾತ್ಕಾಲಿಕ ಮುಖ್ಯಾಧಿಕಾರಿ ವರ್ತನೆಗೆ ಸಾರ್ವಜನಿಕರ ತೀವ್ರ ಅಸಮಾಧಾನ, ಸಭೆಯಲ್ಲೇ ಮಾಧ್ಯಮದವರೊಂದಿಗೆ ಕ್ಷಮೆಯಾಚನೆ!

​ಕೋಟ, ಜೂನ್ 9: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಸ ವಿಲೇವಾರಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುವ “ಉಡುಪಿ ಸಿವಿಕ್ ಆ್ಯಪ್” (ನಾಗರಿಕ ಜಾಗೃತಿ ಆ್ಯಪ್) ಎಂಬ ಹೊಸ ತಂತ್ರಾಂಶ ವ್ಯವಸ್ಥೆಯನ್ನು ಸಾಲಿಗ್ರಾಮದಲ್ಲಿ ಪ್ರಾಯೋಗಿಕವಾಗಿ ಪರಿಚಯಿಸುವ ಕುರಿತು ಚರ್ಚಿಸಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ಭೇಟಿ ನೀಡಿ ವಿಶೇಷ ಸಭೆ ನಡೆಸಿದರು.

​ಸಭೆಯಲ್ಲಿ ಆ್ಯಪ್‌ನ ಪ್ರಾಯೋಗಿಕ ಜಾರಿ ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಅಧಿಕಾರಿಗಳು ವಹಿಸಬೇಕಾದ ಜವಾಬ್ದಾರಿಗಳ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಆ್ಯಪ್ ವಿನ್ಯಾಸಕ ಅನುದೀಪ್ ಅವರು ಪ್ರೊಜೆಕ್ಟರ್ ಮೂಲಕ ತಂತ್ರಾಂಶದ ಕಾರ್ಯವೈಖರಿಯನ್ನು ಪಟ್ಟಣ ಪಂಚಾಯತ್ ಮಾಜಿ ಕೌನ್ಸಿಲರ್‌ಗಳು ಹಾಗೂ ಅಧಿಕಾರಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.


​ಸ್ವಚ್ಛ ಭಾರತ ಯೋಜನೆಯಡಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸುವ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತಾದರೂ, ಸ್ಥಳೀಯರು ಪಟ್ಟಣ ಪಂಚಾಯತ್‌ನ ಸದ್ಯದ ದುಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

​ಸಾಲಿಗ್ರಾಮದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಅವರು ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಪ್ರಸ್ತುತ ಜನಪ್ರತಿನಿಧಿಗಳ ಆಡಳಿತವಿಲ್ಲ. ಮುಖ್ಯಾಧಿಕಾರಿಗಳು ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಸಾರ್ವಜನಿಕರ ದೂರುಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಸಾರ್ವಜನಿಕರೊಂದಿಗೆ ಮುಖ್ಯಾಧಿಕಾರಿಗಳ ವರ್ತನೆ ಸಮರ್ಪಕವಾಗಿಲ್ಲ ಮತ್ತು ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ದೂರಿದ್ದಲ್ಲದೆ, ತಕ್ಷಣವೇ ಖಾಯಂ ಮುಖ್ಯಾಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿದರು. ಅಲ್ಲದೆ ಪಟ್ಟಣ ಪಂಚಾಯತ್‌ನಲ್ಲಿ ದಾರಿದೀಪಗಳ ಸಮರ್ಪಕ ನಿರ್ವಹಣೆ ಇಲ್ಲ, ಚರಂಡಿಗಳಲ್ಲಿ ಕಸ ತುಂಬಿ ತುಳುಕುತ್ತಿದ್ದು ಮಳೆಗಾಲದ ಸಮಸ್ಯೆ ಎದುರಾಗಿದೆ. ಇಂತಹ ಮೂಲಭೂತ ಸಮಸ್ಯೆಗಳನ್ನು ಮೊದಲು ಬಗೆಹರಿಸದೆ, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಕೇವಲ ಸ್ವಚ್ಛತಾ ಆ್ಯಪ್ ಕುರಿತು ಸಭೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ನಾಗರಾಜ್ ಗಾಣಿಗ ಹಾಗೂ ರಮೇಶ್ ಮೆಂಡನ್ ತರಾಟೆಗೆ ತೆಗೆದುಕೊಂಡರು.

​ಡಿಸಿ ಸ್ಪಷ್ಟನೆ: ಇದು ಇತರ ಸಮಸ್ಯೆಗಳ ಚರ್ಚೆಗೆ ಸೂಕ್ತ ವೇದಿಕೆಯಲ್ಲ ಸಾರ್ವಜನಿಕರ ದೂರುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು, ಇಂದಿನ ಸಭೆಯು ಕೇವಲ ಸ್ವಚ್ಛತಾ ಆ್ಯಪ್‌ಗೆ ಸಂಬಂಧಿಸಿದ್ದಾಗಿದೆ. ನಾವು ಸ್ವಚ್ಛ ಪಟ್ಟಣ ಪಂಚಾಯತ್ ಕುರಿತು ಯೋಜನೆ ಸಿದ್ಧಪಡಿಸಿಕೊಂಡು ಬಂದಿದ್ದೇವೆ. ಈ ವೇದಿಕೆಯಲ್ಲಿ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪಟ್ಟಣದ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಸಭೆಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

​ಆ್ಯಪ್ ಮೂಲಕ ಕಸ ಎಸೆಯುವವರಿಗೆ ಬೀಳಲಿದೆ ದಂಡ:

​ಜಿಲ್ಲಾದ್ಯಂತ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದೆ ಮತ್ತು ಎಸ್‌ಎಲ್‌ಆರ್‌ಎಂ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಪ್ರವಾಸಿಗರು ಅಥವಾ ಸ್ಥಳೀಯರು ಎಲ್ಲೆಂದರಲ್ಲಿ ಕಸ ಎಸೆದರೆ, ಸಾರ್ವಜನಿಕರು ಆ್ಯಪ್ ಮೂಲಕ ಅದರ ಫೋಟೋವನ್ನು ಅಪ್‌ಲೋಡ್ ಮಾಡಬಹುದು. ಮಾಹಿತಿ ಲಭ್ಯವಾದ ತಕ್ಷಣ ಪಟ್ಟಣ ಪಂಚಾಯತ್ ಆ ಸ್ಥಳವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಿದೆ ಎಂದು ಅವರು ವಿವರಿಸಿದರು.

​ಇದೇ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು ಪ್ಲಾಸ್ಟಿಕ್ ಎಸೆಯುವವರಿಗೆ ದಂಡ ಹಾಕುವ ಬದಲು ಪ್ಲಾಸ್ಟಿಕ್ ಉತ್ಪಾದಿಸುವ ಕಂಪನಿಗಳನ್ನೇ ಯಾಕೆ ಬ್ಯಾನ್ ಮಾಡಬಾರದು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಪ್ಲಾಸ್ಟಿಕ್ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತಿಲ್ಲ ಮತ್ತು ಈಗಾಗಲೇ ಪ್ಲಾಸ್ಟಿಕ್ ನಿಷೇಧದ ಕುರಿತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ಈ ಸಲಹೆ ಪ್ರಸ್ತುತವಲ್ಲ ಎಂದರು.

​ಮಾಧ್ಯಮದವರ ಕ್ಷಮೆ ಕೋರಿದ ಮುಖ್ಯಾಧಿಕಾರಿ:

​ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಮತ್ತು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕರಾರುವಾಕ್ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ, ಜಿಲ್ಲಾಧಿಕಾರಿಗಳಿಗೆ ಉತ್ತರಿಸುವ ಗಡಿಬಿಡಿಯಲ್ಲಿ ಪತ್ರಿಕಾ ಮಾಧ್ಯಮದವರ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಕ್ಕಾಗಿ ಅವರು ಸಭೆಯಲ್ಲೇ ಬಹಿರಂಗವಾಗಿ ಕ್ಷಮೆ ಯಾಚಿಸಿದರು.
​ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ (ಪಿಡಿ) ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಮಾಜಿ ಕೌನ್ಸಿಲರ್‌ಗಳು, ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.