



ಡೈಲಿವಾರ್ತೆ: 10/ಜೂ./2026


ಮುಖ್ಯ ಶಿಕ್ಷಕರ ಕಿರುಕುಳ ಆರೋಪ: ಶಾಲೆಯ 4ನೇ ಮಹಡಿಯಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್: ಜಿಲ್ಲೆಯ ಪ್ರತಾಪ್ ನಗರದ ಬಳಿ ಇರುವ ಖಾಸಗಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರ ಮಾನಸಿಕ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು 16 ವರ್ಷದ ಸಮೀರ್ ಎಂದು ಗುರುತಿಸಲಾಗಿದೆ. ಬುಧವಾರ (ಜೂನ್ 10) ಮುಂಜಾನೆ ಎಂದಿನಂತೆ ಶಾಲೆಗೆ ತೆರಳಿದ್ದ ಸಮೀರ್, ಈ ತೀವ್ರ ನಿರ್ಧಾರ ಕೈಗೊಂಡಿದ್ದಾನೆ ಎನ್ನಲಾಗಿದೆ.
ಪೋಷಕರಿಗೆ ತಿಳಿಸದೆ ಶವಗಾರಕ್ಕೆ ಸಾಗಿಸಿದ ಆಡಳಿತ ಮಂಡಳಿ:
ತೀವ್ರ ಅನುಮಾನಘಟನೆ ನಡೆದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಯ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿದ್ಯಾರ್ಥಿ ಮಹಡಿಯಿಂದ ಬಿದ್ದ ವಿಷಯವನ್ನು ಪೋಷಕರಿಗೆ ಮುಂಚಿತವಾಗಿ ತಿಳಿಸದ ಶಾಲಾ ಸಿಬ್ಬಂದಿ, ಮೃತದೇಹವನ್ನು ನೇರವಾಗಿ ಬ್ರಿಮ್ಸ್ (BRIMS) ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಹೆತ್ತವರಿಗೆ ಮಾಹಿತಿ ನೀಡದೆ, ರಹಸ್ಯವಾಗಿ ಶವವನ್ನು ಆಸ್ಪತ್ರೆಗೆ ಸಾಗಿಸಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುಟುಂಬಸ್ಥರ ಆಕ್ರಂದನ: ವಿಷಯ ತಿಳಿಯುತ್ತಿದ್ದಂತೆ ಬ್ರಿಮ್ಸ್ ಆಸ್ಪತ್ರೆಯ ಶವಗಾರದ ಮುಂದೆ ಜಮಾಯಿಸಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮ ಮಗನ ಸಾವಿಗೆ ಶಾಲೆಯ ಮುಖ್ಯ ಶಿಕ್ಷಕರೇ ನೇರ ಕಾರಣ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತನ ಪೋಷಕರು ನೀಡಿದ ದೂರಿನನ್ವಯ ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರ ವಿರುದ್ಧ ತನಿಖೆ ಆರಂಭವಾಗಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.