ಡೈಲಿವಾರ್ತೆ: 10/ಜೂ./2026

ಮನೆ ಮಾಲೀಕನಿಗೆ ನಂಬಿಕೆಗೆ ದ್ರೋಹ: 25 ಲಕ್ಷ ರೂ. ನಗದು ಕದ್ದು ನೇಪಾಳಕ್ಕೆ ಎಸ್ಕೇಪ್ ಆಗಲು ಯತ್ನಿಸಿದ ದಂಪತಿ ಅರೆಸ್ಟ್!

​ಬೆಂಗಳೂರು: ಕೆಲಸಗಾರರಿಗೆ ಸಂಬಳ ನೀಡಲು ಮನೆಯಲ್ಲಿಟ್ಟಿದ್ದ ಭಾರಿ ಮೊತ್ತದ ನಗದನ್ನು ಕದ್ದು, ದೆಹಲಿ ಮಾರ್ಗವಾಗಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ನೇಪಾಳಿ ಮೂಲದ ದಂಪತಿಯನ್ನು ಅಮೃತಹಳ್ಳಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಪೂರ್ತಿ 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

​ನೇಪಾಳ ಮೂಲದ ಪವನ್ ಬಿಸ್ತಾ ಮತ್ತು ಆತನ ಪತ್ನಿ ಸೀತಾ ಬಿಸ್ತಾ ಬಂಧಿತ ಆರೋಪಿಗಳಾಗಿದ್ದಾರೆ.
​ಹಣದ ಮೇಲೆಯೇ ಕಣ್ಣಿಟ್ಟು ಕೆಲಸಕ್ಕೆ ಸೇರಿದ್ದ ಖದೀಮರು
​ನಗರದ ಅಮೃತಹಳ್ಳಿ ವ್ಯಾಪ್ತಿಯಲ್ಲಿ ವಾಸವಿರುವ ಉದ್ಯಮಿ ಹಾಗೂ ಕಾಂಟ್ರಾಕ್ಟರ್ ಒಬ್ಬರ ಮನೆಯಲ್ಲಿ ಈ ದಂಪತಿ ಇತ್ತೀಚೆಗಷ್ಟೇ ಮನೆ ಕೆಲಸಕ್ಕೆ ಸೇರಿಕೊಂಡಿದ್ದರು. ಕಳ್ಳತನ ಮಾಡುವ ವ್ಯವಸ್ಥಿತ ಉದ್ದೇಶದಿಂದಲೇ ಇವರು ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದರು ಎಂಬ ಆಘಾತಕಾರಿ ವಿಷಯ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಕೆಲಸಕ್ಕೆ ಸೇರಿದ ಕೇವಲ ಒಂದು ತಿಂಗಳಲ್ಲೇ ಮಾಲೀಕರು ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಎಲ್ಲೆಲ್ಲಿ ಇಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ದಂಪತಿ ಕಲೆಹಾಕಿದ್ದರು.

​ಸ್ಕೆಚ್ ಹಾಕಿ 25 ಲಕ್ಷ ರೂ. ಸಮೇತ ಪಲಾಯನ
​ಇತ್ತೀಚೆಗೆ ಕಾಂಟ್ರಾಕ್ಟರ್ ಅವರು ತಮ್ಮ ಕೈಕೆಳಗಿನ ಕೆಲಸಗಾರರಿಗೆ ಸಂಬಳ ಹಂಚುವ ಸಲುವಾಗಿ ಬ್ಯಾಂಕ್‌ನಿಂದ 25 ಲಕ್ಷ ರೂಪಾಯಿ ನಗದು ಡ್ರಾ ಮಾಡಿಕೊಂಡು ಬಂದು ಮನೆಯ ಕಬೋರ್ಡ್‌ನಲ್ಲಿ ಇರಿಸಿದ್ದರು. ಕಬೋರ್ಡ್‌ನ ಕೀಲಿಯನ್ನು ಮಾಲೀಕರು ಮತ್ತೊಂದು ರಹಸ್ಯ ಜಾಗದಲ್ಲಿ ಇಟ್ಟಿರುವುದನ್ನು ಹೊಂಚು ಹಾಕಿ ಗಮನಿಸಿದ್ದ ನೇಪಾಳಿ ದಂಪತಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಬೋರ್ಡ್ ಲಾಕ್ ಮುರಿದು 25 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಸಮೇತ ಪರಾರಿಯಾಗಿದ್ದರು.


ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಅಮೃತಹಳ್ಳಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದ್ದರು. ಆರೋಪಿಗಳು ಬೆಂಗಳೂರು ನಗರವನ್ನು ತೊರೆದು ರಾಜ್ಯದ ಗಡಿ ದಾಟುವ ಮುನ್ನವೇ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಕದ್ದ ನಗದನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.