



ಡೈಲಿವಾರ್ತೆ: 11/ಜೂ./2026


ಗುಲ್ವಾಡಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ: ಹಳೆ ವಿದ್ಯಾರ್ಥಿ ಉದ್ಯಮಿ ಜಿ. ಹಸೈನರ್ ಅವರ ಸಮಾಜಮುಖಿ ಕೊಡುಗೆ

ಕುಂದಾಪುರ, ಜೂನ್ 10: ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಗುಲ್ವಾಡಿಯ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಜಿ. ಹಸೈನರ್ ಅವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಸೇವೆಯ ಮಾದರಿಯನ್ನು ಪ್ರದರ್ಶಿಸಿದರು.

ಶಾಲಾ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿ. ಹಸೈನರ್ ಅವರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಭಂಡಾರಿ, ಸುರೇಂದ್ರ ಶೆಟ್ಟಿ, ಜಿ.ಡಿ. ಪಂಜು ಪೂಜಾರಿ, ಜಿ. ಇಸ್ಮಾಯಿಲ್, ಹರೀಶ್ ಕುಮಾರ್ ಸೇರಿದಂತೆ ಶಾಲಾ ಶೈಕ್ಷಣಿಕ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕ ವೃಂದದವರಾದ ಶ್ರೀಮತಿ ಮಲ್ಲಿಕಾ, ಶ್ರೀಮತಿ ಸಂಗೀತ, ಶ್ರೀಮತಿ ವಿದ್ಯಾಶ್ರೀ, ಕುಮಾರಿ ಚಂದ್ರಮತಿ ಹಾಗೂ ಪ್ರಸನ್ನ ಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೀಡಿದ ಈ ಕೊಡುಗೆಯನ್ನು ಶ್ಲಾಘಿಸಿದ ಶಾಲಾ ಶೈಕ್ಷಣಿಕ ಕಾರ್ಯಕಾರಿ ಸಮಿತಿಯ ಸದಸ್ಯರು, ಜಿ. ಹಸೈನರ್ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು. ಕಾರ್ಯಕ್ರಮವು ಕೃತಜ್ಞತೆ ಹಾಗೂ ಅಭಿನಂದನೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.