



ಡೈಲಿವಾರ್ತೆ: 11/ಜೂ./2026


ಕುಂದಾಪುರದಲ್ಲಿ ತಡೆಗೋಡೆ ಧ್ವಂಸ – ಜೀವ ಬೆದರಿಕೆ ಆರೋಪ, ದೂರು ದಾಖಲು

ಕುಂದಾಪುರ : ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಅಂಕದಕಟ್ಟೆ ಪ್ರದೇಶದಲ್ಲಿ ತಡೆಗೋಡೆ ಒಡೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ಡಾ. ನಾಗೇಶ (55), ಅಂಕದಕಟ್ಟೆ, ಕೋಟೇಶ್ವರ ಗ್ರಾಮ ನಿವಾಸಿಯಾಗಿದ್ದು, ಸರ್ವ ಪ್ರಕಾಶ ನಗರ ಲೇಔಟ್ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಗ್ರಾಮ ಪಂಚಾಯತಿ ಅನುಮತಿ ಪಡೆದು 23 ಏಪ್ರಿಲ್ 2026ರಂದು ತಮ್ಮ ಲೇಔಟ್‌ಗೆ ಸಂಬಂಧಿಸಿದ ಜಾಗದಲ್ಲಿ ತಡೆಗೋಡೆ ನಿರ್ಮಿಸಿದ್ದರು.
ಆದರೆ, ಜೂನ್ 8ರಂದು ಬೆಳಗಿನ ಜಾವ ಸುಮಾರು 1:30ರ ವೇಳೆಗೆ, ಕೆಲವು ಅಪರಿಚಿತರು ಮುಖಕ್ಕೆ ಕವಚ ಧರಿಸಿ ಲೇಔಟ್ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಹಾರೆ-ಪಿಕಾಸಿಗಳಿಂದ ತಡೆಗೋಡೆ ಧ್ವಂಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಲೇಔಟ್ ಸೆಕ್ಯೂರಿಟಿ ಗಾರ್ಡ್ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ಆರೋಪಿಗಳು ಜೀವ ಬೆದರಿಕೆ ಹಾಕಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಉದಯ ದೇವಾಡಿಗ, ವಿಜಯ ದೇವಾಡಿಗ, ಹೆರಿಯ ದೇವಾಡಿಗ, ಕರಿಯ ದೇವಾಡಿಗ, ಸುಮತಿ ದೇವಾಡಿಗ ಮತ್ತು ಶ್ರೀಪತಿ ಹೆಬ್ಬಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆದಿಂದ ಸುಮಾರು ₹75,000 ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 329(3), 324(4), 351(2) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.