



ಡೈಲಿವಾರ್ತೆ: 11/ಜೂ./2026


ಹಾಸ್ಟೆಲ್ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ: ವಿಷಪೂರಿತ ಆಹಾರ ಸೇವಿಸಿ 15 ವಿದ್ಯಾರ್ಥಿನಿಯರು ಅಸ್ವಸ್ಥ

ಹಾಸನ, ಜೂ.11: ಜಿಲ್ಲೆಯ ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಆಹಾರ ಸುರಕ್ಷತೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುವಂತಹ ಗಂಭೀರ ಘಟನೆ ಸಂಭವಿಸಿದ್ದು, ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾದ ಪರಿಣಾಮ ಸುಮಾರು 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿಯರು ಬುಧವಾರ ರಾತ್ರಿ ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಸಾಂಬಾರ್‌ನಲ್ಲಿ ಹಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ಹಲವು ವಿದ್ಯಾರ್ಥಿನಿಯರು ಆಹಾರ ಸೇವಿಸಿದ್ದು, ಕೆಲವೇ ಕ್ಷಣಗಳಲ್ಲಿ ವಾಂತಿ, ತಲೆಸುತ್ತು ಸೇರಿದಂತೆ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡಿವೆ.
ಅಸ್ವಸ್ಥಗೊಂಡ 15 ವಿದ್ಯಾರ್ಥಿನಿಯರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ತಕ್ಷಣವೇ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಆಸ್ಪತ್ರೆ ಆಡಳಿತವು ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದೆ.
ಈ ಮಧ್ಯೆ, ಸುಮಾರು 400 ವಿದ್ಯಾರ್ಥಿನಿಯರಿರುವ ಹಾಸ್ಟೆಲ್‌ನಲ್ಲಿ ಕಳೆದ ಎರಡು ತಿಂಗಳಿಂದ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಹಾಸ್ಟೆಲ್‌ಗೆ ವಾರಕ್ಕೆ ಕನಿಷ್ಠ ನಾಲ್ಕರಿಂದ ಆರು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಗತ್ಯವಿದ್ದರೂ, ಗ್ಯಾಸ್ ಏಜೆನ್ಸಿಯಿಂದ ಕೇವಲ ಒಂದರಿಂದ ಎರಡು ಸಿಲಿಂಡರ್‌ಗಳನ್ನು ಮಾತ್ರ ಪೂರೈಸಲಾಗುತ್ತಿದೆ ಎನ್ನಲಾಗಿದೆ.
ಸಿಲಿಂಡರ್ ಕೊರತೆಯಿಂದಾಗಿ ಅಡುಗೆ ಸಿಬ್ಬಂದಿ ಹಾಸ್ಟೆಲ್ ಅಡುಗೆಮನೆಯ ಹೊರಭಾಗದಲ್ಲಿ ಸೌದೆ ಒಲೆ ಬಳಸಿ ಅಡುಗೆ ತಯಾರಿಸುತ್ತಿದ್ದರು. ತೆರೆದ ಜಾಗದಲ್ಲಿ ಅಡುಗೆ ಮಾಡುವುದರಿಂದ ಹಾಗೂ ಶುಚಿತ್ವದ ಕೊರತೆಯಿಂದ ಸಾಂಬಾರ್‌ಗೆ ಹಲ್ಲಿ ಬಿದ್ದಿರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ಗ್ಯಾಸ್ ಪೂರೈಕೆ ಸಂಸ್ಥೆಯ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಆರೋಗ್ಯದೊಂದಿಗೆ ಚೆಲ್ಲಾಟವಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹಾಸ್ಟೆಲ್‌ನ ಆಹಾರ ಸುರಕ್ಷತೆ ಮತ್ತು ಮೂಲಭೂತ ಸೌಲಭ್ಯಗಳನ್ನು ತಕ್ಷಣ ಸುಧಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.