ಡೈಲಿವಾರ್ತೆ: 13/ಜೂ./2026

ಪಾರಂಪಳ್ಳಿ ಪಡುಕೆರೆ: ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್‌ನಿಂದ ಸತತ 14ನೇ ವರ್ಷದ ಉಚಿತ ಶಾಲಾ ಪರಿಕರ ವಿತರಣೆ

​ಕೋಟ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಾರಂಪಳ್ಳಿ ಪಡುಕೆರೆಯ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ.) ತನ್ನ ಸಾಮಾಜಿಕ ಬದ್ಧತೆಯನ್ನು ಮುಂದುವರಿಸಿದೆ. ಕ್ಲಬ್‌ನ ವತಿಯಿಂದ ಸತತ 14ನೇ ವರ್ಷವೂ ಯಶಸ್ವಿಯಾಗಿ ಹಮ್ಮಿಕೊಳ್ಳಲಾದ ಉಚಿತ ನೋಟ್ ಬುಕ್ ಹಾಗೂ ಕಲಿಕಾ ಪರಿಕರಗಳ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಗುಡ್ಡೆ ಶಾಲೆಯಲ್ಲಿ ಜರುಗಿತು.

​ಸ್ಥಳೀಯ ಗುಡ್ಡೆ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿ ಮತ್ತು ಕಲಿಕಾ ಪರಿಕರಗಳನ್ನು ವಿತರಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆಯು ಆಸರೆಯಾಯಿತು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಶೇಷ ಐತಾಳ ಅವರು ಮಾತನಾಡಿ ಕಳೆದ 14 ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ನೆರವಾಗುತ್ತಾ ಬಂದಿರುವ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್‌ನ ಸೇವೆ ಶ್ಲಾಘನೀಯ. ಇಂತಹ ಸತ್ಕಾರ್ಯಗಳು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಶಕ್ತಿಯಾಗುತ್ತವೆ ಎಂದು ಪ್ರಶಂಸಿಸಿದರು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಮುಖರಾದ ಅಶೋಕ್ ಸೋಮಯಾಜಿ ಅವರು ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.


​ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬಿನ ಗೌರವಾಧ್ಯಕ್ಷರಾದ ರಾಜೇಶ್ ಉಪಾಧ್ಯ, ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಮತ್ತು ಕಾರ್ಯದರ್ಶಿ ಸುಧಾಕರ್ ಪೂಜಾರಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಮುನ್ನಡೆಸಿದರು.

​ಕ್ಲಬ್‌ನ ಸಕ್ರಿಯ ಸದಸ್ಯರಾದ ಕೃಷ್ಣ ಪಿ., ಸುಧೀರ್ ಪೂಜಾರಿ, ಉಲ್ಲಾಸ್ ಪೂಜಾರಿ ಸೇರಿದಂತೆ ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕ್ಲಬ್‌ನ ಈ ನಿರಂತರ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.