


ಡೈಲಿವಾರ್ತೆ: 13/ಜೂ./2026


ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಿಶೇಷ ಧಾರ್ಮಿಕ ಕಾರ್ಯಕ್ರಮ:
ಶ್ರೀ ಗುರು ನರಸಿಂಹ ಸನ್ನಿಧಿಯಲ್ಲಿ ಸಹಸ್ರ ಪ್ರದಕ್ಷಿಣ ನಮಸ್ಕಾರ ಸಂಪನ್ನ

ಸಾಲಿಗ್ರಾಮ, ಜೂನ್ 13: ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಲೋಕಕಲ್ಯಾಣಾರ್ಥ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ, ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಳೆದ ನಾಲ್ಕು ಶನಿವಾರಗಳಿಂದ ಆಯೋಜಿಸಲಾಗಿದ್ದ ಸಹಸ್ರ ಪ್ರದಕ್ಷಿಣ ನಮಸ್ಕಾರ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿತು.
ಇತ್ತೀಚೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಎನ್. ಪ್ರಕಾಶ್ ಕಾರಂತ್ ಅವರು ಸಹಸ್ರ ಪ್ರದಕ್ಷಿಣ ನಮಸ್ಕಾರದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಿ ಮಾತನಾಡಿದರು. ಶ್ರೀ ಗುರು ಸಾನಿಧ್ಯಕ್ಕೆ ಆಗಾಗ್ಗೆ ಭೇಟಿ ನೀಡಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ದೇವರ ಕೃಪೆ ಖಂಡಿತ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷ ಶ್ರೀ ಚಾಂತಾರು ಅಶೋಕ್ ಭಟ್, ಸಾಲಿಗ್ರಾಮ ವಲಯದ ಮಾಜಿ ಅಧ್ಯಕ್ಷ ಶ್ರೀ ಪಿ. ಗಂಗಾಧರ ಹೆಗ್ಡೆ, ಗೌರವಾಧ್ಯಕ್ಷ ಶ್ರೀ ಎಂ. ಶಿವರಾಮ ಉಡುಪ, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಸಿ. ಚಂದ್ರಶೇಖರ ಉಪಾಧ್ಯ, ಸದಸ್ಯ ಶ್ರೀ ಕೆ. ತಾರಾನಾಥ ಹೊಳ್ಳ, ಪ್ರಧಾನ ಅರ್ಚಕ ಶ್ರೀ ಪಿ. ಜನಾರ್ದನ ಅಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಅಧ್ಯಕ್ಷ ಶ್ರೀ ಜಿ. ಪಟ್ಟಾಭಿರಾಮ ಸೋಮಯಾಜಿ ಅವರು ಸಭೆಯನ್ನು ಸ್ವಾಗತಿಸಿದರೆ, ಕಾರ್ಯದರ್ಶಿ ಶ್ರೀ ಕೆ. ರಾಜಾರಾಮ ಐತಾಳ ಅವರು ವಂದಿಸಿದರು.
ದೇವಸ್ಥಾನದ ಸಿಬ್ಬಂದಿ ವರ್ಗ, ಮಹಾಸಭಾದ ಗ್ರಾಮ ಪ್ರತಿನಿಧಿಗಳು, ಸಾಲಿಗ್ರಾಮ ವಿಪ್ರ ಮಹಿಳಾ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಿಗೆ ಸಾಕ್ಷಿಯಾದರು.