ಡೈಲಿವಾರ್ತೆ: 14/ಜೂ./2026

ಕೋಟೇಶ್ವರದಲ್ಲಿ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ‘ಸೇವಾ ಸಂಕಲ್ಪ’: ಒಂದೇ ವೇದಿಕೆಯಲ್ಲಿ ₹1 ಕೋಟಿ ಶೈಕ್ಷಣಿಕ ಧನಸಹಾಯ ವಿತರಣೆ!
ಬಡತನ ನಿರ್ಮೂಲನೆಗೆ ಶಿಕ್ಷಣವೇ ಮಹಾ ಮದ್ದು: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಒಂದು ಕಾಲದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಕೇವಲ ಕೆಲವು ಸೀಮಿತ ವರ್ಗಕ್ಕೆ ಮಾತ್ರ ಲಭ್ಯವಿದ್ದವು. ಆದರೆ ಇಂದಿನ ಬದಲಾದ ಕಾಲಘಟ್ಟದಲ್ಲಿ ಆ ತಾರತಮ್ಯ ದೂರಾಗಿದೆ. ಬಡ ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಶಕ್ತಿ ಹಾಗೂ ಓದಬೇಕೆಂಬ ಹಂಬಲವಿದ್ದರೆ ಇಡೀ ಸಮಾಜವೇ ಅವರಿಗೆ ಮುಕ್ತ ಅವಕಾಶಗಳನ್ನು ನೀಡುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಭಿಪ್ರಾಯಪಟ್ಟರು.
​ಅವರು ಜೂನ್ 14ರಂದು ಕೋಟೇಶ್ವರದ ಯುವ ಮೆರಿಡಿಯನ್ ಗ್ರಾಮ್ಮಿ ಬಾಲ್ ರೂಮ್ ಸಭಾಂಗಣದಲ್ಲಿ ವಂಡಾರಿನ ಶ್ರೀ ಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ‘ಸೇವಾ ಸಂಕಲ್ಪ’ ಸಹಾಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ವತಿಯಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸುಮಾರು 98 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗಿನ ಆರ್ಥಿಕ ನೆರವನ್ನು ಒಂದೇ ವೇದಿಕೆಯಲ್ಲಿ ವಿತರಿಸುತ್ತಿರುವುದನ್ನು ಶ್ಲಾಘಿಸಿದ ಸಂಸದರು, ಮೆಡಿಕಲ್ ಅಥವಾ ಉನ್ನತ ಶಿಕ್ಷಣಕ್ಕೆ ಸೀಟು ಸಿಕ್ಕರೂ ಮುಂದೆ ಓದಿಸಲು ಆರ್ಥಿಕ ಶಕ್ತಿಯಿಲ್ಲದೆ ಕಂಗಾಲಾಗುವ ಎಷ್ಟೋ ಕುಟುಂಬಗಳು ನಮ್ಮಲ್ಲಿವೆ. ಅಂತಹ ಸಂದರ್ಭದಲ್ಲಿ ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಮತ್ತು ಅವರ ಇಡೀ ತಂಡ ಬಡವರ ನೆರವಿಗೆ ಧಾವಿಸಿ, ಅವರ ಕನಸುಗಳನ್ನು ನನಸು ಮಾಡುತ್ತಿರುವುದು ಸಾರ್ಥಕ ಶ್ರಮದ ಸಂಕೇತ ಎಂದರು. ಕರಾವಳಿ ಜಿಲ್ಲೆಗಳು ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲು ಹಿರಿಯರ ನಿಸ್ವಾರ್ಥ ನಿರ್ಧಾರಗಳೇ ಕಾರಣ ಎಂದ ಅವರು, ಇಂತಹ ಹತ್ತಾರು ಉದ್ಯಮಗಳು ಬೆಳೆದಾಗ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಖಾಸಗಿ ವಲಯದ ಕೊಡುಗೆ ಮಾದರಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಖಾಸಗಿ ವಲಯದಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ದೊರೆಯುತ್ತಿರುವ ಬೆಂಬಲ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಸಂಪತ್ ಕುಮಾರ್ ಶೆಟ್ಟಿಯವರು ತಮ್ಮ ಪರಿಶ್ರಮದಿಂದ ಉದ್ಯಮದಲ್ಲಿ ಯಶಸ್ಸು ಸಾಧಿಸಿ, ಆದಾಯದ ಒಂದು ಭಾಗವನ್ನು ಸಮಾಜ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ. ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯವಿದ್ದಾಗ ಸಂಸ್ಥೆ ಹೇಗೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಕೃಷ್ಣ ಪ್ರಸಾದ್ ಸಂಸ್ಥೆಯೇ ಸಾಕ್ಷಿ ಎಂದು ನುಡಿದರು.

ಜಿಲ್ಲೆಯ ವಿದ್ಯಾರ್ಥಿಗಳು IAS, IPS ಹುದ್ದೆಗೇರಲಿ; ಆರ್ಥಿಕ ನೆರವು ನೀಡಲು ನಾನು ಸದಾ ಸಿದ್ಧ – ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ, ಬಡತನದ ಹಿನ್ನೆಲೆಯಿಂದ ಬಂದ ಮಗುವೊಂದು ಶಿಕ್ಷಣದ ಮೂಲಕ ಉನ್ನತ ಮಟ್ಟಕ್ಕೇರಿದಾಗ ಮಾತ್ರ ಸಮಾಜದಲ್ಲಿ ನೈಜ ಬದಲಾವಣೆ ಸಾಧ್ಯ. 2012ರಲ್ಲಿ ಕಷ್ಟದ ದಿನಗಳ ಮಧ್ಯೆ ಆರಂಭವಾದ ‘ಕೃಷ್ಣ ಪ್ರಸಾದ್ ಕ್ಯಾಶ್ಯೂಸ್’ ಇವತ್ತು ಈ ಮಟ್ಟಕ್ಕೆ ಬೆಳೆಯಲು ಇಡೀ ಸಿಬ್ಬಂದಿ ವರ್ಗದ ಕಠಿಣ ಪರಿಶ್ರಮವೇ ಕಾರಣ. ಪ್ರತಿಯೊಬ್ಬ ಸಿಬ್ಬಂದಿಯ ಬೆವರಿನ ಹನಿಗೂ ನಾನು ಕೃತಜ್ಞನಾಗಿದ್ದೇನೆ” ಎಂದು ಭಾವುಕರಾಗಿ ನುಡಿದರು.
​ಮುಂದುವರಿದು ಮಾತನಾಡಿದ ಅವರು ನಮ್ಮ ಸಂಸ್ಥೆಯ ಪ್ರಮುಖ ಕಮಿಟ್ಮೆಂಟ್ ಎಂದರೆ ಅದು ಮಕ್ಕಳ ವಿದ್ಯಾಭ್ಯಾಸ. ಇದೇ ಕಾರಣಕ್ಕೆ ಸದ್ಯ 1 ಕೋಟಿ ರೂಪಾಯಿ ನಿಧಿಯನ್ನು ಡೊನೇಷನ್ ರೂಪದಲ್ಲಿ ಇರಿಸಲಾಗಿದ್ದು, ಈ ಒಟ್ಟು ಮೊತ್ತದ ಶೇಕಡಾ 80 ರಷ್ಟನ್ನು ಕೇವಲ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲಾಗುವುದು ಎಂದರು.
​ಆಡಳಿತ ವ್ಯವಸ್ಥೆಯ ಲೋಪಕ್ಕೆ ಕಳಕಳಿ; IAS-IPS ಅಧಿಕಾರಿಗಳಾಗಲು ಕರೆ
​ಇದೇ ಸಂದರ್ಭದಲ್ಲಿ ಪ್ರಸ್ತುತ ಆಡಳಿ.ತ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಗಂಭೀರ ಕಳಕಳಿ ವ್ಯಕ್ತಪಡಿಸಿದ ಸಂಪತ್ ಕುಮಾರ್, “ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಒಂದು ಸಣ್ಣ ಕೆಲಸಕ್ಕೂ ಹತ್ತಾರು ದಿನಗಳ ಕಾಲ ಅಲೆಯಬೇಕಾದ ಪರಿಸ್ಥಿತಿ ಇದೆ. ಮನುಷ್ಯನಿಗೆ ಹಣಕ್ಕಿಂತ ಸಮಯ ಬಹಳ ಮುಖ್ಯ. ಸಮಯಕ್ಕೆ ಗೌರವ ಕೊಡುವ ಅಧಿಕಾರಿ ವರ್ಗ ನಮಗೆ ಸಿಕ್ಕರೆ ಮಾತ್ರ ಜಿಲ್ಲೆ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಐಎಎಸ್ ಅಥವಾ ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಜಿಲ್ಲೆಯ ಪ್ರಗತಿಗೆ ಕೊಡುಗೆ ನೀಡಬೇಕು ಎನ್ನುವುದು ನನ್ನ ದೊಡ್ಡ ಕನಸು. ಆ ನಿಟ್ಟಿನಲ್ಲಿ ಸಾಧನೆ ಮಾಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ನೆರವು ನೀಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಫೌಂಡೇಶನ್ ವತಿಯಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ ಬಳಲುವ ಬಡ ರೋಗಿಗಳ ಆರೋಗ್ಯ ರಕ್ಷಣೆಗೂ ಒತ್ತು ನೀಡಲಾಗುವುದು ಎಂದರು.

ಗಣ್ಯರ ಉಪಸ್ಥಿತಿ ಹಾಗೂ ಧನಸಹಾಯ ವಿತರಣೆ
​ಕಾರ್ಯಕ್ರಮದಲ್ಲಿ ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪತ್ರಕರ್ತ ಕೆ. ಸಿರಾಜೇಶ್, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಶೆಟ್ಟಿ ಕೊತ್ತಾಡಿ ಹಾಗೂ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ಮಾತನಾಡಿ, ಸಂಪತ್ ಕುಮಾರ್ ಶೆಟ್ಟರ ಯಶಸ್ಸು ಹಾಗೂ ಅವರ ಔದಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಇದೇ ವೇದಿಕೆಯಲ್ಲಿ ವಿವಿಧ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು. ಶಿಕ್ಷಣ ದತ್ತು ಯೋಜನೆಯಡಿ 10 ವಿದ್ಯಾರ್ಥಿಗಳಿಗೆ ಹಾಗೂ 24 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವೇರಿಕೆಯ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು. ಇದರೊಂದಿಗೆ ದೀನಬಂಧು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ವಂಡಾರು) ಹಾಗೂ ಮಹಾತ್ಮ ಗಾಂಧಿ ಪ್ರೌಢಶಾಲೆ (ಸೈಬ್ರಕಟ್ಟೆ) ಸಂಸ್ಥೆಗಳ ಅತಿಥಿ ಶಿಕ್ಷಕರ ವಾರ್ಷಿಕ ವೇತನಕ್ಕಾಗಿ ಧನಸಹಾಯದ ಚೆಕ್‌ಗಳನ್ನು ವಿತರಿಸಲಾಯಿತು.
​ವೇದಿಕೆಯಲ್ಲಿ ಯುವ ಮೆರಿಡಿಯನ್ ಸಂಸ್ಥೆಯ ಉದಯಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ ಹಾಗೂ ಸೋನಾಲಿ ಸಂಪತ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕೃಷ್ಣಪ್ರಸಾದ್ ಸ್ಟೀಲ್ ಮ್ಯಾನೇಜರ್ ಶ್ರೀನಿವಾಸ ಶೆಟ್ಟಿ ವಂದಿಸಿದರು, ಎಳ್ಳಂಪಳ್ಳಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.