


ಡೈಲಿವಾರ್ತೆ: 15/ಜೂ./2026


ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಅನಂತ್ ಅಂಬಾನಿ ವಿಶೇಷ ಪೂಜೆ: ದೇವಿಯ ದರ್ಶನ ಪಡೆದ ಉದ್ಯಮಿ

ಕುಂದಾಪುರ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ, ಪ್ರಮುಖ ಉದ್ಯಮಿ ಅನಂತ್ ಅಂಬಾನಿ ಅವರು ಜೂನ್ 14ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.

ತಮ್ಮ ಕುಟುಂಬದ ಧರ್ಮಗುರುಗಳೊಂದಿಗೆ ಕೊಲ್ಲೂರಿಗೆ ಆಗಮಿಸಿದ ಅನಂತ್ ಅಂಬಾನಿ ಅವರಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರು ಸಾಂಪ್ರದಾಯಿಕವಾಗಿ ಆತ್ಮೀಯ ಸ್ವಾಗತ ಕೋರಿದರು. ದೇವಾಲಯದ ಧಾರ್ಮಿಕ ನಿಯಮಾವಳಿಗಳ ಪ್ರಕಾರ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ-ಪುರಸ್ಕಾರಗಳನ್ನು ನೆರವೇರಿಸಿದ ಅವರು, ಗರ್ಭಗುಡಿಯ ಎದುರು ಕೆಲಕಾಲ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
ದೇವಿಯ ಕೃಪೆಗೆ ಪಾತ್ರರಾದ ಅನಂತ್ ಅಂಬಾನಿ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ, ಮಹಾಪ್ರಸಾದ ನೀಡಿ ಗೌರವಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಅನಂತ್ ಅಂಬಾನಿ ಅವರು ದೇಶದಾದ್ಯಂತ ವಿವಿಧ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಸರಣಿ ಭೇಟಿ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಕೇರಳ ಸೇರಿದಂತೆ ಪ್ರಮುಖ ರಾಜ್ಯಗಳ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಅವರು, ಇದೀಗ ಕರಾವಳಿಯ ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರಿಗೂ ಭೇಟಿ ನೀಡಿರುವುದು ಭಕ್ತರ ಹಾಗೂ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.