ಡೈಲಿವಾರ್ತೆ: 19/ಜೂ./2026

ಮಹಿಳಾ ಆರೋಗ್ಯದ ಮೇಲಿನ ನಿರ್ಲಕ್ಷ್ಯ ಜೀವಕ್ಕೆ ಕುತ್ತು: ಡಾ. ಮಾಧವ ಪೈ ಎಚ್ಚರಿಕೆ

​ಕೋಟ: ಮನೆಯವರ ಆರೋಗ್ಯದ ಕಡೆಗೆ ಸದಾ ಗಮನಹರಿಸುವ ಮಹಿಳೆ, ಕುಟುಂಬದ ಜವಾಬ್ದಾರಿಗಳ ಜಂಜಾಟದಲ್ಲಿ ತನ್ನದೇ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾಳೆ. ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗಮನಿಸದೇ ಹೋದರೆ, ಅದು ಜೀವಹಾನಿಗೆ ಕಾರಣವಾಗಬಹುದು” ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾಧವ ಪೈ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜೂನ್ 19ರಂದು ಕೋಟತಟ್ಟು ಗ್ರಾಮ ಪಂಚಾಯತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಗ್ರಾಮಸಭೆ’ಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಏರುಪೇರುಗಳ ಕುರಿತು ಮಾತನಾಡಿದ ಅವರು, ಸಾಮಾನ್ಯವಾಗಿ ನಮ್ಮ ಅನಾರೋಗ್ಯಕ್ಕೆ ನಾವು ರೂಢಿಸಿಕೊಂಡಿರುವ ತಪ್ಪು ಜೀವನಶೈಲಿ ಮತ್ತು ಆರೋಗ್ಯದ ಕಡೆಗಿನ ಬೇಜವಾಬ್ದಾರಿತನವೇ ಪ್ರಮುಖ ಕಾರಣವಾಗಿರುತ್ತದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ದೈನಂದಿನ ಜೀವನಶೈಲಿಯನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡರೆ, ಉತ್ತಮ ಹಾಗೂ ಆರೋಗ್ಯವಂತ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.


​ಕಾನೂನು ಮತ್ತು ಹಕ್ಕುಗಳ ಜಾಗೃತಿ:
​ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಲಹೆಗಾರರಾದ ಬಾನುಮತಿ ಎಂ. ನಾಯರಿ ಅವರು ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಇರುವ ವಿವಿಧ ಕಾನೂನುಗಳು, ಸೌಲಭ್ಯಗಳು ಹಾಗೂ ಮಹಿಳೆಯರು ಸಮಾಜದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಭೆಗೆ ವಿಸ್ತೃತ ಮಾಹಿತಿ ನೀಡಿದರು.


​ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ ಹಾಗೂ ಮುಖ್ಯ ಶಿಕ್ಷಕಿ ಜಾನಕಿ ಅವರು ಮಹಿಳಾ ಸಬಲೀಕರಣ ಮತ್ತು ಆರೋಗ್ಯಕ್ಕೆ ಪೂರಕವಾದ ವಿವಿಧ ಪ್ರಮುಖ ವಿಚಾರಗಳ ಕುರಿತು ಜಾಗೃತಿ ಮೂಡಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಆಡಳಿತಾಧಿಕಾರಿ ಹಾಗೂ ಮೆಸ್ಕಾಂ ಎ.ಇ.ಇ. ಆಗಿರುವ ಪ್ರತಾಪಚಂದ್ರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಂಜೀವಿನಿ ಸಂಘದ ಅಧ್ಯಕ್ಷೆ ಮಾಲಿನಿ ಹಾಗೂ ಗ್ರಾ.ಪಂ. ಕಾರ್ಯದರ್ಶಿ ಸುಮತಿ ಅಂಚನ್ ಉಪಸ್ಥಿತರಿದ್ದರು.
​ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವೀಂದ್ರ ರಾವ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಭೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.