


ಡೈಲಿವಾರ್ತೆ: 19/ಜೂ./2026


ರಾಂಗ್ ರೂಟ್‌ನಲ್ಲಿ ಬಂದ ಬಿಎಂಟಿಸಿ ಬಸ್ ಅಟ್ಟಹಾಸಕ್ಕೆ ಒಂದೇ ಕುಟುಂಬದ ಮೂವರು ಬಲಿ!

ದೇವನಹಳ್ಳಿ: ಸರ್ಕಾರಿ ಸಾರಿಗೆ ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಅತ್ಯಂತ ದಾರುಣ ಮತ್ತು ಕರುಳು ಹಿಂಡುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿ ಶುಕ್ರವಾರ (ಜೂನ್ 19) ನಡೆದಿದೆ.
ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಹಾಗೂ ಅವರ ಎರಡು ವರ್ಷದ ಕಂದಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೇವನಹಳ್ಳಿ ತಾಲೂಕಿನ ತೆಲ್ಲಹಳ್ಳಿ ಗ್ರಾಮದ ನಿವಾಸಿಗಳಾದ ಅರುಣ್ (35), ಅವರ ಪತ್ನಿ ಅನುಷಾ (32) ಮತ್ತು ಎರಡು ವರ್ಷದ ಹೆಣ್ಣು ಮಗು ಹರ್ನಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಅಪಘಾತದ ತೀವ್ರತೆಗೆ ದಂಪತಿಯ ಮತ್ತೊಂದು ಮಗು, 5 ವರ್ಷದ ಅನುಶಿಕಾಗೆ ತೀವ್ರ ಗಾಯಗಳಾಗಿದ್ದು, ಸದ್ಯ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆ ವಿವರ:
ಮೂಲಗಳ ಪ್ರಕಾರ, ಅರುಣ್ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೈಕ್‌ನಲ್ಲಿ ದೇವನಹಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸೂಲಿಬೆಲೆಯಿಂದ ಹೊಸಕೋಟೆ ಕಡೆಗೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ‘ರಾಂಗ್ ರೂಟ್’ನಲ್ಲಿ (ವಿರುದ್ಧ ದಿಕ್ಕಿನಲ್ಲಿ) ನುಗ್ಗಿ ಬಂದಿದೆ. ಅತಿ ವೇಗವಾಗಿ ಬಂದ ಬಸ್ ಎದುರಿನಿಂದ ಬರುತ್ತಿದ್ದ ಅರುಣ್ ಅವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯವೇ ಈ ಇಡೀ ದುರಂತಕ್ಕೆ ನೇರ ಕಾರಣ. ನಿಯಮ ಮೀರಿ ತಪ್ಪು ಹಾದಿಯಲ್ಲಿ ಬಸ್ ಚಲಾಯಿಸಿದ್ದರಿಂದಲೇ ಒಂದು ಸುಂದರ ಕುಟುಂಬ ಬೀದಿಗೆ ಬಿದ್ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸೂಲಿಬೆಲೆ ಠಾಣಾ ಪೊಲೀಸರು ಸಾರ್ವಜನಿಕರ ನೆರವಿನಿಂದ ಗಾಯಾಳು ಮಗುವನ್ನು ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಪಘಾತದ ಬಳಿಕ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.