ಡೈಲಿವಾರ್ತೆ: 19/ಜೂ./2026

ರಕ್ಷಕನೇ ಭಕ್ಷಕ: ಸಿಲಿಕಾನ್ ಸಿಟಿಯಲ್ಲಿ ಉದ್ಯಮಿಗಳ ಹೆದರಿಸಿ ₹20 ಲಕ್ಷ ಲೂಟಿ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್!

​ಬೆಂಗಳೂರು, ಜೂನ್ 19: ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬನೇ ದರೋಡೆಕೋರರ ಗ್ಯಾಂಗ್ ಕಟ್ಟಿಕೊಂಡು ಉದ್ಯಮಿಗಳನ್ನು ಹೆದರಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದೂರು ದಾಖಲಾಗಿದ್ದು, ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಈ ಇಡೀ ದರೋಡೆ ಪ್ರಕರಣದ ಮುಖ್ಯ ಸೂತ್ರಧಾರಿಯಾಗಿದ್ದಾನೆ. ಸದ್ಯ ಪೊಲೀಸರು ದರೋಡೆಗೆ ಬಳಸಲಾಗಿದ್ದ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದಾರೆ.

​ವ್ಯವಸ್ಥಿತವಾಗಿ ನಡೆದ ದರೋಡೆ ಸಂಚು:

​ಕೇರಳ ಮೂಲದ ಉದ್ಯಮಿಗಳು ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಲಕ್ಷಾಂತರ ರೂಪಾಯಿ ನಗದಿನೊಂದಿಗೆ ಬೆಂಗಳೂರಿಗೆ ಬಂದು, ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಈ ಉದ್ಯಮಿಗಳ ಬಳಿ ದೊಡ್ಡ ಮೊತ್ತದ ಹಣವಿರುವ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹಣ ಸುಲಿಗೆ ಮಾಡಲು ವ್ಯವಸ್ಥಿತ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಆತ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ಕು ಜನ ಕ್ರಿಮಿನಲ್‌ಗಳೊಂದಿಗೆ ಕೈಜೋಡಿಸಿ ದರೋಡೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ.


​ಇಲಾಖೆಯ ಜೀಪಿನಲ್ಲೇ ಬಂದು ಬ್ಲಾಕ್‌ಮೇಲ್!
​ದಾಳಿಯ ದಿನದಂದು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ತಂಡವು ಹೋಟೆಲ್ ಮುಂಭಾಗದಲ್ಲಿ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನು ತಂದು ನಿಲ್ಲಿಸಿತ್ತು. ಇನ್ಸ್‌ಪೆಕ್ಟರ್ ಮಹೇಶ್ ಜೀಪಿನ ಒಳಗಡೆ ಕುಳಿತು ಇಡೀ ಕಾರ್ಯಾಚರಣೆಯ ನಿಗಾ ವಹಿಸುತ್ತಿದ್ದರೆ, ಇತ್ತ ಗ್ಯಾಂಗ್‌ನ ಇಬ್ಬರು ಸದಸ್ಯರು ಹೋಟೆಲ್ ಕೋಣೆಯೊಳಗೆ ನುಗ್ಗಿದ್ದಾರೆ.
​ತಾವು ಕ್ರೈಮ್ ವಿಭಾಗದ ಪೊಲೀಸರೆಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿದ ಆರೋಪಿಗಳು, ನೀವು ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ, ನಿಮ್ಮನ್ನು ಬಂಧಿಸುತ್ತೇವೆ ಎಂದು ಉದ್ಯಮಿಗಳನ್ನು ತೀವ್ರವಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಇದರಿಂದ ತೀವ್ರ ಭಯಭೀತರಾದ ಉದ್ಯಮಿಗಳಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡ ದರೋಡೆಕೋರರು, ಹೊರಗೆ ಕಾಯುತ್ತಿದ್ದ ಅದೇ ಸಿಐಡಿ ಜೀಪ್ ಹತ್ತಿ ಪರಾರಿಯಾಗಿದ್ದಾರೆ.

​ಸಿಸಿಟಿವಿ ದೃಶ್ಯದಿಂದ ಬಯಲಾದ ಸತ್ಯ:
​ತಾವು ವಂಚಕರ ಜಾಲಕ್ಕೆ ಬಿದ್ದಿರುವುದು ತಡವಾಗಿ ಅರಿವಾದ ತಕ್ಷಣ ಸಂತ್ರಸ್ತ ಉದ್ಯಮಿಗಳು ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಮಡಿವಾಳ ಪೊಲೀಸರು ಹೋಟೆಲ್‌ನ ಸಿಸಿಟಿವಿ (CCTV) ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ದರೋಡೆಗೆ ಸ್ವತಃ ಪೊಲೀಸ್ ಇಲಾಖೆಯ ಅಧಿಕೃತ ಜೀಪ್ ಬಳಕೆಯಾಗಿರುವುದು ಪತ್ತೆಯಾಗಿ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ.

​ತನಿಖೆ ವೇಳೆ ಸಿಕ್ಕಿಬಿದ್ದ ಮಾಸ್ಟರ್ ಮೈಂಡ್:

​ಸಿಸಿಟಿವಿ ಸುಳಿವಿನ ಆಧಾರದ ಮೇಲೆ ತಕ್ಷಣವೇ ಕಾರ್ಯಾಚರಣೆ ನಡೆಸಿದ ಮಡಿವಾಳ ಪೊಲೀಸರು ದರೋಡೆ ಗ್ಯಾಂಗ್ ಸದಸ್ಯನಾದ ಕುಪೇಂದ್ರ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ದರೋಡೆಯ ಅಸಲಿ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಸ್ವತಃ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್‌ ಕನಕಗಿರಿ ಎಂಬ ಆಘಾತಕಾರಿ ಮತ್ತು ಕಹಿ ಸತ್ಯ ಬಯಲಾಗಿದೆ.

​ಇನ್ಸ್‌ಪೆಕ್ಟರ್ ಸೇರಿ ನಾಲ್ವರು ನಾಪತ್ತೆ: ತೀವ್ರ ಶೋಧ
​ತಮ್ಮ ತಂಡದ ಸಹಚರ ಕುಪೇಂದ್ರ ಪೊಲೀಸ್ ಬಲೆಗೆ ಸಿಕ್ಕಿಬೀಳುತ್ತಿದ್ದಂತೆ ಎಚ್ಚೆತ್ತ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಉಳಿದ ನಾಲ್ವರು ಆರೋಪಿಗಳು ರಾತ್ರೋರಾತ್ರಿ ತಲೆಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ದರೋಡೆಗೆ ಬಳಸಿದ್ದ ಸಿಐಡಿ ಜೀಪನ್ನು ವಶಕ್ಕೆ ಪಡೆದಿದ್ದು, ಕಾನೂನು ರಕ್ಷಕನ ಮುಖವಾಡ ಕಳಚಿ ದರೋಡೆಕೋರನಾಗಿ ಬದಲಾಗಿರುವ ಇನ್ಸ್‌ಪೆಕ್ಟರ್ ಮಹೇಶ್ ಮತ್ತು ಆತನ ಇತರೆ ಸಹಚರರ ಪತ್ತೆಗಾಗಿ ಬೆಂಗಳೂರು ಹಾಗೂ ನೆರೆ ಜಿಲ್ಲೆಗಳಲ್ಲಿ ವ್ಯಾಪಕ ಜಾಲ ಬೀಸಿದ್ದಾರೆ.