ಡೈಲಿವಾರ್ತೆ: 20/ಜೂ./2026

​2 ಕೋಟಿ ವಿಮೆಗಾಗಿ ಪತಿಯನ್ನು ಕೊಂದ ಪಾಪಿ ಮಗಳು; ಸಮಾಜಕ್ಕೆ ಮುಖ ತೋರಿಸಲಾಗದೆ ತಾಯಿ ಆತ್ಮಹತ್ಯೆ!

​ಬೆಳಗಾವಿ: ಎರಡು ಕೋಟಿ ರೂಪಾಯಿ ಜೀವ ವಿಮೆ ಹಣಕ್ಕಾಗಿ ಮಾಜಿ ಸೈನಿಕನೊಬ್ಬನನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಹಾಗೂ ದುರಂತ ತಿರುವು ಸಿಕ್ಕಿದೆ.

ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿ ಪೊಲೀಸರ ಅತಿಥಿಯಾಗುತ್ತಿದ್ದಂತೆ, ಅತ್ತ ಮಗಳ ಪಾಪದ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ಹೆತ್ತ ತಾಯಿ ನೇಣಿಗೆ ಶರಣಾಗಿದ್ದಾರೆ.

​ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಸುಮಾ ಮಂಜರಗಿ ಅವರ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

​ಮಗಳ ಕೃತ್ಯಕ್ಕೆ ತಾಯಿ ಬಲಿ: ಮಗಳು ಸುಮಾ ಮತ್ತು ಆಕೆಯ ಪ್ರಿಯಕರ ಸೇರಿ ಅಳಿಯನನ್ನು ಅತ್ಯಂತ ಕ್ರೂರವಾಗಿ ಕೊಂದ ವಿಷಯ ತಿಳಿಯುತ್ತಿದ್ದಂತೆ ತಾಯಿ ಮಹಾದೇವಿ ತೀವ್ರ ಆಘಾತಕ್ಕೊಳಗಾಗಿದ್ದರು. ಜೂನ್ 14ರಂದು ಮಗಳನ್ನು ಯಮಕನಮರಡಿ ಪೊಲೀಸರು ಬಂಧಿಸುತ್ತಿದ್ದಂತೆ, ಇಡೀ ಊರಿನಲ್ಲಿ ತಲೆ ಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಗಳ ಈ ಘೋರ ಅಪರಾಧದಿಂದ ತೀವ್ರ ಮಾನಸಿಕ ಯಾತನೆ ಹಾಗೂ ಅಪಮಾನಕ್ಕೀಡಾಗಿದ್ದ ಮಹಾದೇವಿ ಅವರು ಇಂದು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿರುವ ತಮ್ಮ ನಿವಾಸದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಯಮಕನಮರಡಿ ಠಾಣೆಯ ಪೊಲೀಸರು ಘೋಡಗೇರಿ ಗ್ರಾಮದ ಮೃತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಗಳ ದುಷ್ಕೃತ್ಯಕ್ಕೆ ಹೆತ್ತ ತಾಯಿಯೇ ಬಲಿಯಾದ ಹಿನ್ನೆಲೆಯಲ್ಲಿ ಮನೆಯ ಮುಂಭಾಗದಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಇಡೀ ಗ್ರಾಮದಲ್ಲಿ ಕಣ್ಣೀರಿನ ವಾತಾವರಣ ಸೃಷ್ಟಿಯಾಗಿದೆ.

​ಏನಿದು ಭೀಕರ ಕೊಲೆ ಪ್ರಕರಣ?
​ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಾಜಿ ಸೈನಿಕ ಸಂದೀಪ್ ಮಂಜರಗಿ ಎಂಬುವವರ ನಿಗೂಢ ಸಾವು ಸಂಭವಿಸಿತ್ತು. ತನಿಖೆ ನಡೆಸಿದಾಗ ಸಂದೀಪ್ ಹೆಸರಲ್ಲಿದ್ದ ಬರೋಬ್ಬರಿ ಎರಡು ಕೋಟಿ ರೂಪಾಯಿ ಜೀವ ವಿಮೆ ಹಣವನ್ನು ಕೈವಶ ಮಾಡಿಕೊಳ್ಳಲು ಪತ್ನಿ ಸುಮಾ ಮಂಜರಗಿ ತನ್ನ ಪ್ರಿಯಕರ ಪುಂಡಲೀಕನ ಜೊತೆ ಸೇರಿ ಈ ಭೀಕರ ಕೊಲೆಗೆ ಸ್ಕೆಚ್ ಹಾಕಿರುವುದು ಬೆಳಕಿಗೆ ಬಂದಿತ್ತು.

​ಸಲೈನ್‌ನಲ್ಲಿ ವಿಷ ಬೆರೆಸಿ ಹತ್ಯೆ: ಮಾರ್ಚ್ 13ರಂದು ಸಂದೀಪ್ ಬೈಕ್‌ನಿಂದ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಸಂದೀಪ್‌ ಗುಣಮುಖರಾಗಿ ಡಿಸ್ಚಾರ್ಜ್ ಆಗುವ ಮುನ್ನವೇ, ಪತ್ನಿ ಸುಮಾ ಮತ್ತು ಪ್ರಿಯಕರ ಸೇರಿ ಆಸ್ಪತ್ರೆಯ ಸಲೈನ್ ಬಾಟಲಿಯಲ್ಲಿ ವಿಷ ಬೆರಸಿ ಹಾಗೂ ನಿದ್ದೆ ಮಾತ್ರೆ ನೀಡಿ ಮಾರ್ಚ್ 15ರಂದು ಅವರನ್ನು ಹತ್ಯೆ ಮಾಡಿದ್ದರು.

​ವರದಿ ಬದಲಿಸಲು 3 ಲಕ್ಷ ಲಂಚ: ಇದೊಂದು ನೈಸರ್ಗಿಕ ಸಾವು ಅಥವಾ ಅಪಘಾತದ ಸಾವು ಎಂದು ಬಿಂಬಿಸಲು, ಮರಣೋತ್ತರ ಪರೀಕ್ಷೆಯ ವರದಿಯನ್ನು ಬದಲಾಯಿಸಲು ವಿಧಿವಿಜ್ಞಾನ (FSL) ಪ್ರಯೋಗಾಲಯದ ಸಿಬ್ಬಂದಿಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಲಂಚ ನೀಡಲಾಗಿತ್ತು!

​ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
​ಯಾವುದೇ ಗಂಭೀರ ಗಾಯಗಳಿಲ್ಲದ ಸಂದೀಪ್ ಹಠಾತ್ತನೆ ಮೃತಪಟ್ಟಿದ್ದು ಆರಂಭದಿಂದಲೂ ಪೊಲೀಸರಿಗೆ ಅನುಮಾನ ತಂದಿತ್ತು. ಇದರ ನಡುವೆ, ವಿಮೆ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ನಡುವೆ ಜಗಳ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಪುಂಡಲೀಕ ಅಪಘಾತವಾದ ವ್ಯಕ್ತಿ ತಕ್ಷಣ ಸತ್ತಿದ್ದು ಹೇಗೆ?” ಎಂದು ವಾಟ್ಸಪ್‌ನಲ್ಲಿ ಸ್ಟೇಟಸ್ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ.

​ಒಟ್ಟು 9 ಜನರ ಬಂಧನ:
ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸರು ಜೂನ್ 14 ರಂದು ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ ಸೇರಿದಂತೆ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
​ಹಣದ ಆಸೆಗೆ ಬಿದ್ದು ಗಂಡನನ್ನೇ ಕೊಂದ ಮಗಳ ಪಾಪದ ಕೃತ್ಯ, ಇದೀಗ ಹೆತ್ತ ತಾಯಿಯ ಜೀವವನ್ನೇ ಬಲಿಪಡೆದಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ.