


ಡೈಲಿವಾರ್ತೆ: 20/ಜೂ./2026


ಕಡಬ: ಕೌಟುಂಬಿಕ ಕಲಹ ಶಂಕೆ; ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ಪತಿಯು ಪತ್ನಿಯನ್ನು ಕೊಲೆ ಮಾಡಿ, ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶನಿವಾರ (ಜೂನ್ 20) ಅಪರಾಹ್ನ ಬೆಳಕಿಗೆ ಬಂದಿದೆ.
ಮೃತರನ್ನು ಮೂಲತಃ ಕಾರ್ಕಳ ಬಜಗೋಳಿಯ ನಿವಾಸಿ ದಿನೇಶ್ ಹಾಗೂ ಸಿದ್ದಕಟ್ಟೆ ಮೂಲದ ಸಂಗೀತಾ ಎಂದು ಗುರುತಿಸಲಾಗಿದೆ. ಈ ದಂಪತಿಯು ಆಲಂಕಾರು ಕಜೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.
ಘಟನೆಯ ಹಿನ್ನೆಲೆ: ಮೃತ ದಿನೇಶ್ ಅವರು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದಷ್ಟೇ ಅವರು ಹೋಟೆಲ್ ವ್ಯವಹಾರವನ್ನು ನಿಲ್ಲಿಸಿ ಇಲ್ಲಿಂದ ತೆರಳಿದ್ದರು. ಆದರೆ, ಶುಕ್ರವಾರವಷ್ಟೇ (ಜೂನ್ 19) ಈ ದಂಪತಿ ಆಲಂಕಾರಿನ ಕಜೆಯಲ್ಲಿರುವ ತಮ್ಮ ಬಾಡಿಗೆ ಮನೆಗೆ ಪುನಃ ಮರಳಿದ್ದರು ಎಂದು ತಿಳಿದುಬಂದಿದೆ. ಶನಿವಾರದಂದು ಮನೆಯ ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿದ್ದು, ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಪತಿಯೇ ಪತ್ನಿಯನ್ನು ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಮೃತ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ.
ಘಟನಾ ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಹಜರು ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ನಿಖರವಾದ ಕಾರಣ ಏನೆಂಬುದು ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಿದೆ.